ಬೆಳೆ ಸಾಲ ಮುಕ್ತಾಯಗೊಂಡು ಎನ್‌ಒಸಿ ಪಡೆದಿದ್ದರೂ ರೈತನ ಖಾತೆಯಲ್ಲಿ ಹಣವನ್ನು ಕಡಿತಗೊಳಿಸಲಾಗಿದೆ ಎಂದು ಆರೋಪಿಸಿ ಬ್ಯಾಂಕ್‌ವೊಂದರ ವಿರುದ್ಧ ರಾಜ್ಯ ರೈತ ಸಂಘ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ, ಬ್ಯಾಂಕ್ ಅಧಿಕಾರಿಗಳಿಗೆ ಅಹವಾಲು ಪತ್ರ ನೀಡಿದರು. 
ರಾಜ್ಯ

ಸಾಲ ತೀರಿಸಿದ್ದರೂ ಖಾತೆಯಿಂದ ಹಣ ಕಡಿತ

ಕೊಳ್ಳೇಗಾಲ: ಬೆಳೆ ಸಾಲ ಮುಕ್ತಾಯಗೊಂಡು ಎನ್‌ಒಸಿ ಪಡೆದಿದ್ದರೂ ರೈತನ ಖಾತೆಯಲ್ಲಿ ಹಣವನ್ನು ಕಡಿತಗೊಳಿಸಿದ್ದ ಬ್ಯಾಂಕ್‌ವೊಂದರ ವಿರುದ್ಧ ರಾಜ್ಯ ರೈತ ಸಂಘ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಇದಕ್ಕೂ ಮುನ್ನ ಕೃಷಿ ಮಾರುಕಟ್ಟೆ ಆವರಣದಲ್ಲಿ ಜಮಾಯಿಸಿದ್ದ ರೈತರ ಬೈಕ್ ಮೂಲಕ ಬಸ್ ನಿಲ್ದಾಣದ ಸಮೀಪವಿರುವ ಬ್ಯಾಂಕ್‌ಮುಂದೆ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಈ ವೇಳೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ರೈತ ಮುಖಂಡರಾದ ದೊರೆಸ್ವಾಮಿ ಎಂಬುವರು ಎಸ್‌ಬಿಐ ಬ್ಯಾಂಕ್‌ನಲ್ಲಿ 10 ವರ್ಷಗಳ ಹಿಂದೆ ಬೆಳೆ ಸಾಲ 50 ಸಾವಿರ ರೂ.ಪಡೆದುಕೊಂಡು ವಾಪಸ್ಸು ಹಣವನ್ನು ಮರುಪಾವತಿ ಮಾಡಿದ್ದರೂ ಸಹ ಇವರ ಉಳಿತಾಯ ಖಾತೆಯಲ್ಲಿ 1,10,212 ಲಕ್ಷ ರೂ.ನ್ನು ಕಡಿತಗೊಳಿಸಲಾಗಿದೆ. ಹಣ ಕಳೆದುಕೊಂಡ ರೈತ ದೊರೆಸ್ವಾಮಿ ಬ್ಯಾಂಕ್‌ಗೆ ಪ್ರಶ್ನಿಸಲು ಬಂದಾಗ ಬ್ಯಾಂಕ್ ಮ್ಯಾನೇಜರ್ ಉಡಾಫೆಯಿಂದ ಉತ್ತರಿಸಿದ್ದಾರೆ. ಹಾಗಾಗಿ ದೊರೆಸ್ವಾಮಿ ಅವರ ಪರವಾಗಿ ಬ್ಯಾಂಕ್ ಮುಂದೆ ಪ್ರತಿಭಟಿಸುತ್ತಿರುವುದಾಗಿ ತಿಳಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ್ದ ಬ್ಯಾಂಕ್‌ನ ರೀಜನಲ್ ಮ್ಯಾನೇಜರ್ ಶ್ರವಣ್, ಅಸಿಸ್ಟೆಂಟ್ ಮ್ಯಾನೇಜರ್ ಗೌತಮ್, ಫೀಲ್ಡ್ ಆಫೀಸರ್ ಪವಿತ್ರಾ, ಲೋನ್ ಡಿಪಾರ್ಟ್‌ಮೆಂಟ್ ಆಫೀಸರ್ ಸಮೀರ್ ರೈತರ ಅಹವಾಲು ಸ್ವೀಕರಿಸಿ, ರೈತರಿಂದ ಕಡಿತಗೊಳಿಸಿದ್ದ ಹಣವನ್ನು ಇನ್ನೂ ಎರಡು ದಿನಗಳೊಳಗೆ ಮರುಪಾವತಿಸುವುದಾಗಿ ಲಿಖಿತ ರೂಪದಲ್ಲಿ ಪತ್ರ ನೀಡಿದ ಬಳಿಕ ರೈತರು ಪ್ರತಿಭಟನೆಯನ್ನು ಕೈಬಿಟ್ಟು ತೆರಳಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ರಾಜ್ಯ ಖಾಯಂ ಸದಸ್ಯ ಹೆಬ್ಬಸೂರು ಬಸವಣ್ಣ, ಚಾಮರಾಜನಗರ ತಾಲೂಕು ಉಪಾಧ್ಯಕ್ಷ ಆಲೂರು ಸಂತೋಷ್, ಜಿಲ್ಲಾ ಕಾಯಂ ಸದಸ್ಯ ರವಿನಾಯ್ಡು, ನಿಕೋಲಸ್ ಜಾಗೇರಿ, ಅಶೋಕ್, ಹನೂರು ತಾಲೂಕು ಅಧ್ಯಕ್ಷ ಅಮ್ಜಾದ್ ಖಾನ್, ಅರೇಪಾಳ್ಯ ನಾಗರಾಜು ಇತರರಿದ್ದರು.