ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿ ಮಠದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಉಪನಯನದಲ್ಲಿ ಭಾಗವಹಿಸಿದ್ದ ಭಕ್ತರು.
ಅರಕಲಗೂಡು: ಮಠ, ಮಂದಿರಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ನೈತಿಕ ಮೌಲ್ಯಗಳನ್ನು ಬಲಪಡಿಸುವ ಕೇಂದ್ರಗಳಾಗಿವೆ ಎಂದು ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಅರೇ ಮಾದನಹಳ್ಳಿ ಮಠದಲ್ಲಿ ಗುರುವಾರ ನಡೆದ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಏಕೀಕರಿಸುವ ಶಕ್ತಿ ಹೊಂದಿದೆ. ಮಠದ ಧರ್ಮ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಉಳಿವು ಬೆಳವಣಿಗೆಗೆ ನಮ್ಮ ಸಮಾಜ ಸದಾ ಬದ್ಧವಾಗಿದೆ ಎಂದರು.
ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಸತ್ಕಾರ್ಯಗಳಿಗೆ ಸದ್ಭಳಕೆ ಮಾಡಿಕೊಳ್ಳಬೇಕು, ಪ್ರಾಣಿ, ಪಕ್ಷಿಗಳಿಗೆ ಸಾಮಾನ್ಯ ಜ್ಞಾನ ನೀಡಿರುವ ಭಗವಂತ ಮನುಷ್ಯನಿಗೆ ಮಾತ್ರ ಉನ್ನತ ಜ್ಞಾನಾರ್ಜನೆ ಕರುಣಿಸಿದ್ದಾನೆ. ಮನುಷ್ಯ ಉನ್ನತ ಅಲೋಚನೆ ಬೆಳೆಸಿಕೊಳ್ಳಬೇಕು. ಸತ್ಕಾರ್ಯಗಳು ಸದಾ ಕಾಲ ಶಾಶ್ವತವಾಗಿರುತ್ತವೆ. ದುಶ್ಚಟ, ದುರಭ್ಯಾಸಗಳಿಂದ ದೂರ ಉಳಿದು ಬದುಕಿನಲ್ಲಿ ಶಾಂತಿ ನೆಮ್ಮದಿ ಕಂಡುಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.
ಅರೆಮಾದನಹಳ್ಳಿ ಕಿರಿಯ ಶ್ರೀಗಳಾದ ಅನಂತ ಶ್ರೀ ವಿಭೂಷಿತ ಜ್ಞಾನಘನ ವಿದ್ಯಾತೀರ್ಥ ಸ್ವಾಮಿಜಿ ಮಾತನಾಡಿ, ಯಾವುದೇ ಓರ್ವ ವ್ಯಕ್ತಿ ಯಶಸ್ಸು ಸಾಧಿಸಬೇಕೆಂದರೆ ಅವನ ಮುಂದೆ ಗುರಿ ಇರಬೇಕು, ಹಿಂದೆ ಗುರುವಿರಬೇಕು ಎನ್ನುವ ನಂಬಿಕೆಯಿದೆ. ಗುರುವಿಲ್ಲದೆ ಜೀವನಕ್ಕೆ ಅಥವಾ ಜ್ಞಾನಕ್ಕೆ ಯಾವುದೇ ರೀತಿಯ ಅರ್ಥವಿರುವುದಿಲ್ಲ. ನಮ್ಮ ಮೊದಲ ಗುರು ತಾಯಿ ನಮಗೆ ಜೀವನದ ಅರ್ಥವನ್ನು ನೀಡುತ್ತಾಳೆ. ಅದೇ ರೀತಿ ಜೀವನಕ್ಕೆ ಅಗತ್ಯವಾದ ಜ್ಞಾನವನ್ನು ಗುರು ನೀಡುತ್ತಾನೆ. ಅಂದರೆ, ಗುರುವಿಲ್ಲದೆ ಏನೂ ಸಾಧ್ಯವಿಲ್ಲ ಎಂದು ತಿಳಿಸಿದರು.