ವಿಜಯಪುರ :
ಪಟ್ಟಣದ 15 ಮತ್ತು 19ನೇ ವಾರ್ಡ್ ಮಧ್ಯ ಭಾಗದಲ್ಲಿರುವ ಅಂಗನವಾಡಿ ಕೇಂದ್ರದ ಮುಂದಿನ ರಸ್ತೆ ಕೆಸರುಗದ್ದೆಯಾಗಿದ್ದು, ಪುಟ್ಟ ಮಕ್ಕಳು ಕೆಸರಿನಲ್ಲೇ ಎದ್ದುಬಿದ್ದು ಶಾಲೆಗೆ ಹೋಗಿ ಬರುತ್ತಿದ್ದಾರೆ. ಸ್ಥಳಿಯರು ಸಹ ಸಂಚಾರಕ್ಕೆ ಪರದಾಡುತ್ತಿದ್ದಾರೆ.
ರಸ್ತೆ 15ಮತ್ತು 19ನೇ ವಾರ್ಡ್ಗಳ ವ್ಯಾಪ್ತಿಯಲ್ಲಿದೆ. ನಿತ್ಯ ನೂರಾರು ಮಂದಿ ಇದೇ ಮಾರ್ಗದಲ್ಲಿ ಓಡಾಡುತ್ತಾರೆ. ಚಿಕ್ಕ ಮಕ್ಕಳು ಅಂಗನವಾಡಿಗೆ ಈ ದಾರಿಯಲ್ಲೇ ಹೋಗಬೇಕು. ಆದರೆ ರಸ್ತೆ ಕೆಸರು ಗದ್ದೆಯಾಗಿದ್ದು, ಅಲ್ಲಲ್ಲಿ ದೊಡ್ಡದೊಡ್ಡ ಗುಂಡಿಗಳು ಬಿದ್ದಿವೆ. ಮಳೆ ಬಂದರೆ ರಸ್ತೆ ಯಾವುದು? ಗುಂಡಿಯಾವುದು ಎನ್ನುವ ಪರಿಸ್ಥಿತಿ ಇದೆ. ದ್ವಿಚಕ್ರ ವಾಹನ ಸವಾರರು ಭಯದಲ್ಲೇ ಓಡಾಡಬೇಕು. ಇನ್ನು ರಸ್ತೆಯಲ್ಲಿ ಇತರ ವಾಹನಗಳು ಹೋದರೆ ಕೆಸರು ನೀರು ಅಕ್ಕಪಕ್ಕದ ಮನೆಗಳ ಗೋಡೆಗಳಿಗೆ ಚಿಮ್ಮಿ, ಅಂದಗೆಡಿಸುತ್ತಿದೆ. ಕೆಲವೊಮ್ಮೆ ಕೆಸರು ನೀರು ಮನೆಗಳಿಗೆ ನುಗ್ಗಿ, ಅವಾಂತರವನ್ನೂ ಸೃಷ್ಟಿಸುತ್ತಿದ್ದು, ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗಗಳೂ ಹರಡುತ್ತಿವೆ. ಆದರೆ ಅಧಿಕಾರಿಗಳು ಮಾತ್ರ ರಸ್ತೆ ದುರಸ್ತಿಗೆ ರ್ನಿಲಕ್ಷ$್ಯ ತೋರುತ್ತಿದ್ದಾರೆ. ವಾರ್ಡ್ಗಳಿಗೆ ಸದಸ್ಯರು ಸಹ ಇಲ್ಲದ ಕಾರಣ ದುರಸ್ತಿ ಕಂಡಿಲ್ಲ.
ರಸ್ತೆ ಪಕ್ಕದಲ್ಲಿರುವ ರಾಜಕಾಲುವೆ ಕಸ-ಕಡ್ಡಿಗಳಿಂದ ತುಂಬಿಕೊಂಡಿದ್ದೇ ರಸ್ತೆ ಅವ್ಯವಸ್ಥೆಗೆ ಕಾರಣ ಎನ್ನಲಾಗುತ್ತಿದೆ.
ಕಾಲುವೆಯಲ್ಲಿ ಸರಾಗವಾಗಿ ಹರಿಯಲು ಅವಕಾಶ ಇಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ ಹರಿಯುತ್ತದೆ. ಅಧಿಕಾರಿಗಳು ಕೂಡಲೇ ಕಾಲುವೆಯನ್ನು ಸ್ವಚ್ಛಗೊಳಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.
ರಸ್ತೆ ಸಂಪೂರ್ಣ ಹಾಳಾಗಿದ್ದು, ಸ್ಥಳ ಪರಿಶೀಲಿಸಲಾಗಿದೆ. 15ನೇ ಹಣಕಾಸು ಯೋಜನೆಯಡಿ ಕಾಮಗಾರಿಯನ್ನು ಸೇರಿಸಿಕೊಂಡು, ರಸ್ತೆ ಅಭಿವೃದ್ಧಿ ಮಾಡಲಾಗುವುದು.
— > ಶೇಖರ್ ರೆಡ್ಡಿ ಅಭಿಯಂತ ಪುರಸಭೆ ವಿಜಯಪುರ