PM Narendra Modi 
ರಾಜ್ಯ

ಭವಿಷ್ಯದ ದಿನಗಳಿಗಾಗಿ ಮೋದಿ ನೀಡಿದ ಪಂಚಸೂತ್ರಗಳು| ದೇಶದ ಜನರಿಗೆ ಪ್ರಧಾನಿಯ ಕರೆ| PM Narendra Modi

ಶ್ರವಣ್ ನೀರಬಿದಿರೆ

ಪ್ರಮುಖ ಮುಖ್ಯಾಂಶಗಳು

  • ಪರೋಪಕಾರ, ಸೇವಾ ಧರ್ಮ ಭಾರತದ ಜೀವಾಳ
  • ಆರ್ಟ್​ ಆಫ್​ ಲಿವಿಂಗ್​ನ ನೂತನ ಧ್ಯಾನ ಮಂದಿರ ಲೋಕಾರ್ಪಣೆ
ಬೆಂಗಳೂರು: ಭಾಷೆ, ಸಂಸ್ಕೃತಿ, ಆರಾಧನಾ ಪದ್ಧತಿ ಸೇರಿ ಅನೇಕ ವಿಷಯಗಳಲ್ಲಿ ವೈವಿಧ್ಯತೆಯಿದ್ದರೂ, ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ ಮತ್ತು ಸೇವೆಯೇ ಪರಮ ಧರ್ಮ ಎಂಬ ತತ್ವದ ಪಾಲನೆಯ ಕಾರಣ ಭಾರತ ಇಂದು ಒಟ್ಟಾಗಿ ಉಳಿದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ದಿ ಆರ್ಟ್​ ಆಫ್​ ಲಿವಿಂಗ್​ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಥೆಯ 45ನೇ ವಾರ್ಷಿಕೋತ್ಸವ ಮತ್ತು ಸ್ಥಾಪಕ ಶ್ರೀ ರವಿ ಶಂಕರ್​ ಗುರೂಜಿಯ 70ನೇ ಜನ್ಮದಿನೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಧ್ಯಾನ ಕೇಂದ್ರವನ್ನು ಲೋಕಾರ್ಪಣೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಭವಿಷ್ಯದ ದಿನಗಳ ಒಳಿತಿಗಾಗಿ ಪಂಚಸೂತ್ರಗಳನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು.

ಭವಿಷ್ಯಕ್ಕಾಗಿ ಮೋದಿ ಪಂಚ ಸೂತ್ರ: 

1.ಸಾವಯವ ಕೃಷಿಗೆ ಆದ್ಯತೆ: ರೈತರನ್ನು ರಾಸಾಯನಿಕ ಮುಕ್ತ ಸಾವಯವ ಕೃಷಿಯೊಂದಿಗೆ ಮರುಜೋಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಭೂಮಿ ತಾಯಿಯನ್ನು ಅಪಾಯಕಾರಿ ರಾಸಾಯನಿಕಗಳಿಂದ ರಸುವುದು ಕೂಡ ಒಂದು ರೀತಿಯಲ್ಲಿ ಜೀವನ ಕಲೆಯೇ (ಆರ್ಟ್​ ಆಫ್​ ಲಿವಿಂಗ್​) ಆಗಿದೆ ಎಂದು ಬಣ್ಣಿಸಿದರು.
2. ಏಕ್​ ಪೇಡ್​ ಮಾ ಕೆ ನಾಮ್​: ಪರಿಸರ ಸಂರಕ್ಷಣೆಯು ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದ ಮೋದಿ, ತಾಯಿಯ ಹೆಸರಿನಲ್ಲಿ ಗಿಡ ನೆಡುವ ಅಭಿಯಾನವನ್ನು ಮತ್ತಷ್ಟು ವಿಸ್ತರಿಸಲು ಕರೆ ನೀಡಿದರು.
3. ಜಲ ಸಂರಕ್ಷಣೆ: ನೀರಿನ ಒಂದೊಂದು ಹನಿಯನ್ನು ಉಳಿಸುವುದು ನಮ್ಮ ಜೀವಮಂತ್ರವಾಗಬೇಕು. ಮುಂಬರುವ ಮುಂಗಾರಿನಲ್ಲಿ ಒಂದೊಂದು ಹನಿಗೂ ಹೆಚ್ಚು ಬೆಳೆ (ಪರ್​ ಡ್ರಾಪ್​, ಮೋರ್​ ಕ್ರಾಪ್​) ಎಂಬ ಧ್ಯೇಯವಾಕ್ಯವನ್ನು ಜನಪ್ರಿಯಗೊಳಿಸಬೇಕು. ನೀರು ಮತ್ತು ವಿದ್ಯುತ್​ ಉಳಿಸುವುದು ಕೂಡ ಆರ್ಟ್​ ಆರ್ಪ​ ಲಿವಿಂಗ್​ ಆಗಿದೆ.
4. ಸ್ಥಳಿಯ ಉತ್ಪನ್ನಕ್ಕೆ ಪ್ರೋತ್ಸಾಹ: ಏಕಬಳಕೆಯ ಪ್ಲಾಸ್ಟಿಕ್​ಗಳ ಬಳಕೆ ಕಡಿಮೆ ಮಾಡಬೇಕು. ಸ್ಥಳಿಯವಾಗಿ ತಯಾರಿಸಿದ ವಸ್ತುಗಳನ್ನು ಖರೀದಿಸುವ ಮೂಲಕ ಸ್ವಾವಲಂಬಿ ಭಾರತಕ್ಕೆ ಕೊಡುಗೆ ನೀಡಬೇಕು.
5. ಮಿಷನ್​ ಲೈಫ್​: ಪ್ರಕೃತಿಗೆ ಹೊರೆ ಉಂಟು ಮಾಡದೆ ಸಮತೋಲನ ಸಾಧಿಸಿ ಬದುಕುವುದನ್ನು ಕಲಿಯಬೇಕಿದೆ. #Modi

ಯುವಶಕ್ತಿಯೇ ದೇಶದ ಚಾಲಕ ಶಕ್ತಿ 

ವಿಶ್ವವು ಇಂದು ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಮೂಲಕ ವೇಗದ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ಭಾರತವು ಈ ಬದಲಾವಣೆಗಳಲ್ಲಿ ಕೇವಲ ಭಾಗಿದಾರ ಮಾತ್ರವಲ್ಲದೆ ನಾಯಕತ್ವವನ್ನು ವಹಿಸಿಕೊಳ್ಳುತ್ತಿದೆ. ಡಿಜಿಟಲ್​ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯು ನಮ್ಮನ್ನು ಡಿಜಿಟಲ್​ ಪೇಮೆಂಟ್​ ಕ್ಷೇತ್ರದ ನಾಯಕನ್ನಾಗಿ ಮಾಡಿದೆ. ಸ್ಟಾರ್ಟಪ್​ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲೂ ವೇಗದ ಬದಲಾವಣೆಗಳು ನಡೆಯುತ್ತಿವೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ನಮ್ಮ ಯುವಜನರು ಹೊಸ ಇತಿಹಾಸ ಬರೆಯುತ್ತಿದ್ದು, ದೇಶದ ಚಾಲಕಶಕ್ತಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.