ಬೆಂಗಳೂರು: ಕನಕಪುರ ರಸ್ತೆಯಲ್ಲಿರುವ ‘ಪ್ರಯೋಗ ಶೈಕ್ಷಣಿಕ ಸಂಶೋಧನಾ ಸಂಸ್ಥೆಯ’ ಕಾರ್ಯಚಟುವಟಿಕೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಭಾನುವಾರ ‘ಮನದ ಮಾತು’ (ಮನ್ ಕಿ ಬಾತ್) ತಿಂಗಳ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಂಸ್ಥೆಯು ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳ ವೈಜ್ಞಾನಿಕ ಸಂಶೋಧನೆಗಳಿಗೆ ಪ್ರವೇಶಿಸಲು ಉತ್ತೇಜನ ನೀಡುತ್ತಿದೆ. ಸಂಸ್ಥೆಯ ಉಪಕ್ರಮವಾದ ‘ಅನ್ವೇಷಣವು’ 9-12ನೇ ತರಗತಿಯ ವಿದ್ಯಾರ್ಥಿಗಳು ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು, ಅನುಭವಿ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ನೈಜ ಪ್ರಪಂಚದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಪ್ರಮುಖ ಪಾತ್ರವಹಿಸಿದೆ. ಆರಂಭಿಕ ಹಂತದಲ್ಲಿ ಪರಿಣಾಮಕಾರಿಯಾಗಿ ಕಲಿಕೆ ಉತ್ತೇಜಿಸಲು ಕಾರ್ಯಕ್ರಮ ನೆರವಾಗುತ್ತಿದೆ. ಇದರಿಂದಾಗಿ ಸಾಕಷ್ಟು ವಿದ್ಯಾರ್ಥಿಗಳಿಗೆ ಆಳವಾದ ಜ್ಞಾನ ಪಡೆಯಲು ಸಾಧ್ಯವಾಗುತ್ತಿದೆ ಎಂದು ಸಂಸ್ಥೆಯ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಯೋಗ ಶೈಕ್ಷಣಿಕ ಸಂಶೋಧನಾ ಸಂಸ್ಥೆಯ ವಿಶಿಷ್ಟ ಶಿಕ್ಷಣ ಉಪಕ್ರಮದ ಕುರಿತು ‘ಮನ್ ಕಿ ಬಾತ್’ನ 132ನೇ ಸಂಚಿಕೆಯಲ್ಲಿ ಉಲ್ಲೇಖಿಸಿದ ಮೋದಿ ಅವರು, ಸಂಸ್ಥೆಯು ಶಾಲಾ ಮಟ್ಟದಲ್ಲಿ ಸಂಶೋಧನೆ ಮತ್ತು ವಿಜ್ಞಾನವನ್ನು ಜನಪ್ರಿಯಗೊಳಿಸುವತ್ತ ಗಮನಹರಿಸಿದೆ. 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರ, ವಿಜ್ಞಾನ ಮತ್ತು ಯೋಗಕ್ಷೇಮದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶ ನೀಡಲಿದೆ. ಇಂತಹ ಉಪಕ್ರಮಗಳು ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಪ್ರಾಯೋಗಿಕ ಅನುಭವ ನೀಡಲಿದೆ. ವಿದ್ಯಾರ್ಥಿಗಳು ನಡೆಸಿದ ಸಂಶೋಧನೆಯನ್ನು ಮಂಡಿಸಲು ವೇದಿಕೆಯನ್ನೂ ಒದಗಿಸುತ್ತಿದೆ ಎಂದರು.
12 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ವಿಸ್ತರಣೆ:
‘ಪ್ರಯೋಗ ಶೈಕ್ಷಣಿಕ ಸಂಶೋಧನಾ ಸಂಸ್ಥೆಯ’ ಉಪಕ್ರಮವಾದ ‘ಅನ್ವೇಷಣ’ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ನರೇಂದ್ರ ಮೋದಿ ಅವರಿಗೆ ಪ್ರಯೋಗದ ಸ್ಥಾಪಕ ಮತ್ತು ಮುಖ್ಯ ಮಾರ್ಗದರ್ಶಕ ಡಾ. ಎಚ್.ಎಸ್.ನಾಗರಾಜ ಕೃತಜ್ಞತೆ ಸಲ್ಲಿಸಿದರು. ನಮ್ಮ ಉಪಕ್ರಮವು 12 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ವಿಸ್ತರಿಸಲಾಗಿದೆ. ಉಪಕ್ರಮದಡಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಶೋಧನೆ ಮತ್ತು ವಿಜ್ಞಾನದ ಬಗ್ಗೆ ಹೇಳಿಕೊಡಲಾಗುತ್ತಿದೆ. ಈ ಮೂಲಕ ಗುಣಮಟ್ಟದ ಕಲಿಕೆ ಮತ್ತು ಸಂಶೋಧನೆಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತಿದೆ. ನಮ್ಮ ಸಂಸ್ಥೆಗೆ ವಿಶ್ರಾಂತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮಾರ್ಗದರ್ಶಕರಾಗಿದ್ದಾರೆ ಎಂದರು.
‘ಪ್ರಯೋಗ ಶೈಕ್ಷಣಿಕ ಸಂಶೋಧನಾ ಸಂಸ್ಥೆ’ ಎಂಬುದು ಶಿಕ್ಷಣ ಸಂಶೋಧನಾ ಸಂಸ್ಥೆಯಾಗಿದೆ. ಬೆಂಗಳೂರಿನ ಕನಕಪುರಸ್ತೆಯಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಬಲೀಕರಣ ಮತ್ತು ಮುಂದಿನ ಪೀಳಿಗೆಗೆ ಸಂಶೋಧಕರನ್ನು ತಯಾರಿಸಲು ಕೆಲಸ ಮಾಡುತ್ತಿದೆ. ಹಲವು ಉಪಕ್ರಮದಡಿ ಶೈಕ್ಷಣಿಕ ಕ್ಷೇತ್ರದ ಮೇಲೆ ಬೆಳಕು ಚೆಲ್ಲುತ್ತಿದೆ. ಸಂಶೋಧನೆ ಮತ್ತು ಸಾಮಾಜಿಕ ಪ್ರಭಾವದ ಉಪಕ್ರಮಗಳ ಮೂಲಕ ಭಾರತೀಯ ಶಿಕ್ಷಣದಲ್ಲಿನ ಕೆಲವು ಸಂಕೀರ್ಣ ಸಮಸ್ಯೆ ಪರಿಹರಿಸಲು ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಡಾ. ಎಚ್.ಎಸ್. ನಾಗರಾಜ ಮಾರ್ಗದರ್ಶನದಲ್ಲಿ ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವಿಜ್ಞಾನ, ಸಂಶೋಧನೆ ಮತ್ತು ಆಧುನಿಕ ಶಿಕ್ಷಣ ವಿಧಾನಗಳ ಮೂಲಕ ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ಸಂಸ್ಥೆ ಕೆಲಸ ಮಾಡುತ್ತಿದೆ. ಇದರಿಂದಾಗಿ ಕಲಿಕೆಯ ಗುಣಮಟ್ಟ ಮತ್ತು ಪ್ರಭಾವ ಎರಡನ್ನೂ ಹೆಚ್ಚಿಸುತ್ತಿದೆ. ವಿದ್ಯಾರ್ಥಿಗಳು ಕೈಗೊಂಡಿರುವ ವೈಜ್ಞಾನಿಕ ಸಂಶೋಧನಾ ಕೈಗೊಳ್ಳಲು ಅನುವು ಮಾಡಿಕೊಡುತ್ತಿದೆ.