ರಾಜ್ಯದಲ್ಲಿ ವಾರಪೂರ್ತಿ ಸಾಧಾರಣ ಮಳೆ
ಬೆಂಗಳೂರು: ರಾಜ್ಯದಲ್ಲಿ ವಾರಪೂರ್ತಿ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬೆಂಗಳೂರು ನಗರ ಸೇರಿ ರಾಜ್ಯದ ಘಟ್ಟ ಪ್ರದೇಶಗಳಲ್ಲಿ ಭಾನುವಾರ ಮಳೆ ಬಿತ್ತು.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಆ.31ರಿಂದ ಸೆ.6ವರೆಗೆ ಮಳೆಯಾಗಲಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು. ಕೋಲಾರ, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ವಿಜಯಪುರ, ಕೊಪ್ಪಳ ಮತ್ತು ಬೀದರ್ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಲಘು ಪ್ರಮಾಣದಲ್ಲಿ ಮಳೆ ಸುರಿಯಲಿದೆ.
ಮುಂದಿನ 4 ದಿನ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಇದೇ ವೇಳೆ ಗಂಟೆಗೆ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿ.ಸೆ.ದಾಖಲಾಗಬಹುದು ಎಂದು ಇಲಾಖೆ ಮಾಹಿತಿ ನೀಡಿದೆ.