ಬಾಣಸಮುದ್ರ ಗ್ರಾಮದಲ್ಲಿ ಮಾದರಿ ಗ್ರಾಮ ಮಾಡುವ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗುರುವಾರ ಭೂಮಿಪೂಜೆ ನೆರವೇರಿಸಿದರು. ಪ್ರೇಮ್‌ಕುಮಾರ್, ಅಪ್ಪಣ್ಣ, ಮಧುಸೂದನ್, ಪುಟ್ಟಸೌಮಿ, ಶ್ರೀಧರ್, ಮಲ್ಲೇಶ್, ರಾಮಚಂದ್ರ ಇದ್ದರು.
ಹಲಗೂರು: ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ಒಳಪಟ್ಟ ಬಾಣಸಮುದ್ರ ಗ್ರಾಮದಲ್ಲಿ ಗುರುವಾರ ಮಾದರಿ ಗ್ರಾಮ ಮಾಡುವ 50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಮಳವಳ್ಳಿ ತಾಲೂಕಿನಲ್ಲಿ ಹಲವಾರು ಗ್ರಾಮಗಳನ್ನು ವಿದ್ಯುಕ್ತವಾಗಿ ಮಾದರಿ ಗ್ರಾಮಗಳಾಗಿ ಮಾಡಲು ಆಯ್ಕೆ ಮಾಡಲಾಗಿದೆ. ಅದರಲ್ಲಿ ಬಾಣಸಮುದ್ರವೂ ಒಂದು. ಮೊದಲು ಎಲ್ಲಾದರೂ ವಿದ್ಯುತ್ ತಂತಿಗಳ ಸಮಸ್ಯೆ ಇದ್ದರೆ ಅದನ್ನು ಹೊಸದಾಗಿ ಹಾಕುವುದು, ವಿದ್ಯುತ್ ಕಂಬಗಳ ಅವಶ್ಯಕತೆ ಇದ್ದರೆ ಮಧ್ಯದಲ್ಲಿ ಹಾಕುವುದು, ಮೊದಲು ಗ್ರಾಮಕ್ಕೆ ಒಂದೇ ಟ್ರಾನ್ಸ್ ಫಾರ್ಮರ್ ಇರುತ್ತಿತ್ತು. ಈಗ ಲೋಡ್ ಹೆಚ್ಚಾಗುವುದರಿಂದ ಹೊಸದಾಗಿ ಮತ್ತೊಂದು ಟ್ರಾನ್ಸ್‌ಫಾರ್ಮರ್ ಹಾಕುವುದು, ಇವೆಲ್ಲ ಈ ಮಾದರಿ ಗ್ರಾಮ ಯೋಜನೆಯಲ್ಲಿ ಬರುತ್ತವೆ. ಈ ಹಣವನ್ನು ರಸ್ತೆ ಕಾಮಗಾರಿಗೂ ಸಹ ಉಪಯೋಗಿಸಿಕೊಳ್ಳಿ. ಅವಶ್ಯಕತೆ ಇದ್ದರೆ ಹೆಚ್ಚುವರಿ ಹಣ ಬಿಡುಗಡೆ ಮಾಡಿಸಿ ಕೊಡುತ್ತೇನೆ ಎಂದರು.
ಸಾರ್ವಜನಿಕರು ನಮ್ಮ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಕೊಠಡಿಗಳ ಕೊರತೆ ಇರುವುದರಿಂದ ಖಾಲಿ ನಿವೇಶನವನ್ನು ಕೊಡಿಸಿ ಕೊಠಡಿಗಳನ್ನು ನಿರ್ಮಿಸಿ ಕೊಡುವಂತೆ ಮನವಿ ಮಾಡಿದ ಮೇರೆಗೆ ಅವರು ಸರ್ಕಾರಿ ಜಾಗ ನಿಮ್ಮ ಗ್ರಾಮದಲ್ಲಿ ಇಲ್ಲ ನಿವೇಶನ ಕೊಡುವವರು ಇದ್ದರೆ ನನಗೆ ತಿಳಿಸಿ, ನಾನು ಮಾತನಾಡಿ ಮುಂದಿನ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದರು.
ಎಇಇ ಪ್ರೇಮ್‌ಕುಮಾರ್, ಎಇ ಅಪ್ಪಣ್ಣ, ಜೆಇ ಮಧುಸೂದನ್, ಪುಟ್ಟಸ್ವಾಮಿ, ಡಿ.ಹಲಸಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಧರ್, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಶ, ರಾಮಚಂದ್ರ, ಸಿದ್ದರಾಜು, ಡಿ.ಎಫ್.ಫಾರೂಕ್ ಪಾಷ ಹಾಗೂ ಮುಖಂಡರಾದ ಮಹೇಶ, ಬಸವರಾಜ ಮತ್ತು ಇತರರು ಇದ್ದರು.