MLC Election 
ರಾಜ್ಯ

MLC Election: ಬಿಜೆಪಿ ಮತಗಳಲ್ಲಿ ಕ್ರಾಸ್‌ ವೋಟಿಂಗ್‌? ದ್ರೋಹ ಮಾಡಿದವರು ಸಿಕ್ಕಿ ಬೀಳ್ತಾರೆ ಎಂದ ಅಶೋಕ್‌

ಬೆಂಗಳೂರು: ವಿಧಾನ ಪರಿಷತ್‌ನ 7 ಸ್ಥಾನಗಳಿಗೆ(MLC Election) ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ 5 ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದೆ. ಉಳಿದ ಎರಡು ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಈ ನಡುವೆ ನಡೆದಿರುವ ಕ್ರಾಸ್‌ ವೋಟಿಂಗ್‌ ಭಾರೀ ಚರ್ಚೆಗೆ ಕಾರಣವಾಗಿದ್ದು, ಕೆಲ ಶಾಸಕರು ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಮತ ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ.
ಚುನಾವಣಾ ಫಲಿತಾಂಶದ ಬಳಿಕ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌, ಬಿಜೆಪಿ ಮತಗಳಲ್ಲಿ ಕೆಲವು ಕ್ರಾಸ್‌ ವೋಟಿಂಗ್‌ ನಡೆದಿರುವ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು. ಯಾವ ಶಾಸಕರು ಪಕ್ಷದ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದ್ದು, ಈ ಬಗ್ಗೆ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
"ನಮ್ಮ ಕೆಲವು ಮತಗಳು ಬೇರೆ ಅಭ್ಯರ್ಥಿಗಳ ಕಡೆಗೆ ಹೋಗಿರುವ ಮಾಹಿತಿ ಸಿಕ್ಕಿದೆ. ಯಾರು ಪಕ್ಷದ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬುದು ಪತ್ತೆಯಾಗಲಿದೆ. ಪಕ್ಷಕ್ಕೆ ದ್ರೋಹ ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರ ವಿರುದ್ಧ ಮುಂದಿನ ಕ್ರಮದ ಬಗ್ಗೆ ಪಕ್ಷವೇ ತೀರ್ಮಾನ ಕೈಗೊಳ್ಳಲಿದೆ" ಎಂದು ಹೇಳಿದರು.
ಬಿಜೆಪಿಯ ಅಭ್ಯರ್ಥಿಗಳಾದ ಆರ್‌. ರಘು ಮತ್ತು ಲಿಂಗರಾಜು ಪಾಟೀಲ್‌ ಕಣದಲ್ಲಿದ್ದರು. ಆರ್‌. ರಘು ಅವರಿಗೆ 29 ಮತಗಳು ಬಂದಿದ್ದರೂ, ಅದರಲ್ಲಿ ಒಂದು ಮತ ಅಸಿಂಧುವಾಗಿದೆ. ಲಿಂಗರಾಜು ಪಾಟೀಲ್‌ ಅವರಿಗೆ 27 ಮತಗಳು ಲಭಿಸಿದ್ದವು. ಗೆಲುವಿಗೆ ಅಗತ್ಯವಿದ್ದ ಮತಗಳ ಸಂಖ್ಯೆ 27.63 ಆಗಿದ್ದರಿಂದ ಅಂತಿಮ ಹಂತದ ಮತ ಎಣಿಕೆ ನಿರ್ಣಾಯಕವಾಗಿತ್ತು.
ಇನ್ನೊಂದೆಡೆ ಜೆಡಿಎಸ್‌ ಅಭ್ಯರ್ಥಿ ಗೋವಿಂದರಾಜು ಅವರಿಗೆ 14 ಮತಗಳು ಲಭಿಸಿದ್ದವು. ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದ ನಂತರ ಅವರ ಮತಗಳ ಮರುಹಂಚಿಕೆ ಪ್ರಕ್ರಿಯೆ ನಡೆದಿದ್ದು, ಅದರ ಲಾಭ ಬಿಜೆಪಿ ಅಭ್ಯರ್ಥಿ ಲಿಂಗರಾಜು ಪಾಟೀಲ್‌ಗೆ ದೊರೆಯಿತು. ಇದರೊಂದಿಗೆ ಅವರು ಗೆಲುವಿನ ದಡ ಸೇರಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ ನಿರೀಕ್ಷೆಗಿಂತ ಹೆಚ್ಚಿನ ಮತಗಳನ್ನು ಪಡೆದುಕೊಂಡಿರುವುದು ವಿಶೇಷ ಗಮನ ಸೆಳೆದಿದೆ. ಅಧಿಕೃತ ಸಂಖ್ಯಾಬಲಕ್ಕಿಂತ ಹೆಚ್ಚುವರಿ ಮತಗಳು ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಚಲಾವಣೆಯಾಗಿರುವುದು ಕ್ರಾಸ್‌ ವೋಟಿಂಗ್‌ ಕುರಿತು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಐದು ಸ್ಥಾನಗಳನ್ನು ಗೆದ್ದು ರಾಜಕೀಯವಾಗಿ ಮೇಲುಗೈ ಸಾಧಿಸಿದ್ದರೆ, ಕೊನೆಯ ಕ್ಷಣದ ಲೆಕ್ಕಾಚಾರ ಮತ್ತು ದ್ವಿತೀಯ ಪ್ರಾಶಸ್ತ್ಯದ ಮತಗಳ ನೆರವಿನಿಂದ ಬಿಜೆಪಿ ತನ್ನ ಎರಡೂ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಕ್ರಾಸ್‌ ವೋಟಿಂಗ್‌ ವಿಚಾರ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.