ಐಪಿಎಲ್​ ಟಿಕೆಟ್​ ವಿವಾದ  
ರಾಜ್ಯ

ಐಪಿಎಲ್​ ಟಿಕೆಟ್​ ಬದಲಿಗೆ ಆ ವಿಷಯ ಏನಾದ್ರೂ ಚರ್ಚಿಸಿದ್ರೆ ಸದನದ ಘನತೆ ಹೆಚ್ಚುತ್ತಿತ್ತು! ಶಾಸಕರ ಮಾತಿಗೆ ತೇಜಸ್ವಿ ಸೂರ್ಯ ಗರಂ

ಪ್ರಮುಖ ಮುಖ್ಯಾಂಶಗಳು

  • ಸದನದಲ್ಲೂ ಸದ್ದು ಮಾಡಿದ ಐಪಿಎಲ್​ ಟಿಕೆಟ್​
  • ಜನಸಾಮಾನ್ಯರಂತೆ ಕ್ಯೂನಲ್ಲಿ ನಿಂತು ನಾವು ಟಿಕೆಟ್​ ಖರೀದಿಸಬೇಕಾ?
  • ವಿಧಾನಸಭೆಯಲ್ಲಿ ಶಾಸಕರ ಬೇಡಿಕೆಗೆ ಸಂಸದ ತೇಜಸ್ವಿ ಸೂರ್ಯ ಗರಂ
ಬೆಂಗಳೂರು: ನಾಳೆ (ಮಾ.28) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್​ನ ಮೊದಲನೇ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಫ್ರಾಂಚೈಸಿಯ ಅಭಿಮಾನಿಗಳು ಟಿಕೆಟ್​ಗಾಗಿ ಜಟಾಪಟಿ ನಡೆಸುತ್ತಿರುವುದು ಒಂದೆಡೆಯಾದರೆ, ವಿಧಾನಸಭೆಯಲ್ಲೂ ಐಪಿಎಲ್​ ಟಿಕೆಟ್​ ವಿಚಾರಕ್ಕೆ ಮಾತಿನ ಜಟಾಪಟಿ ನಡೆದಿರುವುದು ಸದ್ಯ ಹಲವರ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಶಾಸಕರು, ಸಚಿವರು ಮತ್ತು ಅವರ ಕುಟುಂಬಸ್ಥರಿಗೆ ಪ್ರತ್ಯೇಕ ಟಿಕೆಟ್‌ಗಳನ್ನು ನೀಡಬೇಕು ಎಂದು ಹುನಗುಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಸದನದಲ್ಲಿ​ ಆಗ್ರಹಿಸಿದರು. ಜನಸಾಮಾನ್ಯರ ಜೊತೆ ನಾವೂ ಕ್ಯೂನಲ್ಲಿ ನಿಂತು ಟಿಕೆಟ್​ ಖರೀದಿಸಬೇಕಾ? ನಾವು ವಿಐಪಿಗಳು. ಶಾಸಕರಿಗೆ ಮತ್ತು ಶಾಸಕರ ಕುಟುಂಬಕ್ಕೆ ಒಂದು ಟಿಕೆಟ್ ಅಲ್ಲ ಐದು​ ಟಿಕೆಟ್​ ಕೊಡಬೇಕು. ಇಲ್ಲಿ ಎಂಎಲ್​ಎಗಳಿಗೆ ಸರಿಯಾದ ಗೌರವ ಸಿಗುತ್ತಿಲ್ಲ ಎಂದು ಮನದ ಮಾತನ್ನು ಹೊರಹಾಕಿದರು.
ಶಾಸಕರಿಗೆ ಮತ್ತು ಶಾಸಕರ ಕುಟುಂಬಕ್ಕೂ ಐಪಿಎಲ್​ ಟಿಕೆಟ್​ ಬೇಕು ಎಂಬ ಕಾಶಪ್ಪನವರ್​ ಹೇಳಿಕೆಗೆ ಕಿಡಿಕಾರಿರುವ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಶಾಸಕರು ವಿಧಾನಸೌಧದಲ್ಲಿ ಐಪಿಎಲ್ ಅಭಿಮಾನಿಗಳ ಸುರಕ್ಷತೆ ಮತ್ತು ಭದ್ರತೆಯ ಕುರಿತು ಚರ್ಚಿಸಲು ಸಮಯ ಕಳೆದಿದ್ದರೆ, ಖಂಡಿತ ಅದು ಸದನದ ಘನತೆಯನ್ನು ಎತ್ತಿಹಿಡಿಯುತ್ತಿತ್ತು. ಆದರೆ, ಅದರ ಬದಲಿಗೆ ತಮಗೂ ಮತ್ತು ತಮ್ಮ ಕುಟುಂಬಗಳಿಗೆ ಉಚಿತ ಟಿಕೆಟ್‌ಗಳನ್ನು ಕೊಡುವಂತೆ ಬೇಡಿಕೊಳ್ಳುತ್ತಿರುವುದು ಮತ್ತು ಬೆದರಿಕೆ ಹಾಕುವುದನ್ನು ನಾವು ನೋಡುವಂತಾಯಿತು ಎಂದರು.
ಇದು ಕೇವಲ ಕಳಪೆ ಮಟ್ಟದ ಆದ್ಯತೆಯಲ್ಲ. ಆಳವಾದ ಸಮಸ್ಯೆಯನ್ನು ಎತ್ತಿ ತೋರಿಸುತ್ತಿದೆ. ಸಾರ್ವಜನಿಕ ಹುದ್ದೆಯನ್ನು ಹಕ್ಕು ಎಂದು ನೋಡುವ ವಿಐಪಿ ಮನಸ್ಥಿತಿಯಾಗಿದೆ. ಏಕೆ ಕ್ರೀಡಾ ಸಂಸ್ಥೆ, ಸಂಘಗಳು ಶಾಸಕರಿಗೆ ಬದ್ಧವಾಗಿರಬೇಕು? ಸಾಮಾನ್ಯ ಜನರಿಗೆ ನಿರಾಕರಿಸಲಾದ ಸವಲತ್ತುಗಳು ಚುನಾಯಿತ ಪ್ರತಿನಿಧಿಗಳೇಕೆ? ಇದರ ನಿರೀಕ್ಷೆಯಾದರೂ ಏಕೆ? ಸಾರ್ವಜನಿಕ ಹುದ್ದೆ ಒಂದು ಸವಲತ್ತು ಅಲ್ಲ. ಅದೊಂದು ಜವಾಬ್ದಾರಿ. ಈ ಸಂಸ್ಕೃತಿ ಶೀಘ್ರವೇ ಕೊನೆಗೊಳ್ಳಬೇಕು ಎಂದು ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ​