ಬಿಜೆಪಿ ಶಾಸಕ ಎಸ್. ಸುರೇಶ್‌ಕುಮಾರ್  
ರಾಜ್ಯ

ಜಿಬಿಎ ಸುತ್ತೋಲೆಗೆ ಶಾಸಕ ಸುರೇಶ್‌ಕುಮಾರ್ ಆಕ್ಷೇಪ

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ನಲವತ್ತು ಅಡಿ ಅಗಲಕ್ಕಿಂತ ಕಡಿಮೆ ಇರುವ ರಸ್ತೆಯಲ್ಲಿನ ಉದ್ದಿಮೆಗಳ ಪರವಾನಗಿಯನ್ನು ತಡೆಹಿಡಿಯುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊರಡಿಸಿರುವ ಆದೇಶದ ವಿರುದ್ಧ ಬಿಜೆಪಿ ಶಾಸಕ ಎಸ್. ಸುರೇಶ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
40 ಅಡಿ ಅಗಲಕ್ಕಿಂತ ಕಡಿಮೆ ರಸ್ತೆ ಪ್ರದೇಶದಲ್ಲಿ ಉದ್ದಿಮೆ ಪರವಾನಗಿಗಳಿಗೆ ತಡೆಹಿಡಿಯುವಂತೆ ಜಿಬಿಎ ಹೊರಡಿಸಿರುವ ಸುತ್ತೋಲೆಯಿಂದ ಆಘಾತಕಾರಿ ಮತ್ತು ಆತಂಕಕಾರಿ ವಿಚಾರವಾಗಿದೆ. ಬೀದಿಬದಿಯ ವ್ಯಾಪಾರವನ್ನೇ ನಂಬಿಕೊಂಡಿದ್ದ ಮಧ್ಯಮ ವರ್ಗದ ಜನರನ್ನು ಅಕ್ಷರಶಃ ಬೀದಿಗೆ ತಳ್ಳುವಂತೆ ಮಾಡಲಾಗುತ್ತಿದೆ ಎಂದು ಸುರೇಶ್‌ಕುಮಾರ್, ಜಿಬಿಎ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಬಿಬಿಎಂಪಿ ಅಂದಾಜು 741 ಚ.ಕಿ. ಮೀಟರ್ ವಿಸ್ತಾರ ಹೊಂದಿದ್ದು, ಒಂದು ಅಂದಾಜಿನ ಪ್ರಕಾರ, 340ರಿಂದ 360 ಚ. ಕಿ.ಮೀ. ಪ್ರದೇಶ ವಸತಿ ಬಳಕೆಗೆ ಮೀಸಲಾಗಿದೆ. ಶೇ.46-48 ಭಾಗ ವಸತಿ ಪ್ರದೇಶವಾಗಿದೆ. ಅಲ್ಲದೆ, 2008ರಲ್ಲಿ ಹಲವಾರು ಹಳ್ಳಿ ಪ್ರದೇಶಗಳು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲಾಗಿದೆ. ಇತ್ತೀಚೆಗೆ 110 ಹಳ್ಳಿಗಳನ್ನು ಸೇರಿಸಿಕೊಂಡ ನಂತರ ಜಿಬಿಎ ವಿಸ್ತಾರವು ಹೆಚ್ಚಾಗಿದೆ. ಈ ಹಳ್ಳಿ ಪ್ರದೇಶಗಳಲ್ಲಿನ ವಸತಿ ಪ್ರದೇಶಗಳು 40 ಅಡಿ ರಸ್ತೆಯನ್ನು ಹೊಂದಿವೆಯೇ? ಎಂಬುದು ಜಿಬಿಎ ಅಧಿಕಾರಿಗಳು ಹೇಳಬೇಕಿದೆ ಎಂದು ಪ್ರಶ್ನಿಸಿದ್ದಾರೆ.
ನಗರ ಯೋಜನೆಯಿಂದ ಮತ್ತು ಅನಧಿಕೃತ ಬಡಾವಣೆಗಳು ಕೂಡ 40 ಅಡಿ ರಸ್ತೆಯನ್ನು ಹೊಂದಿರುವುದಿಲ್ಲ. ಇದಕ್ಕೆ ಬಿಬಿಎಂಪಿ ಮತ್ತು ಬಿಡಿಎ ಕಣ್ಣು ಮುಚ್ಚಿ ಕುಳಿತಿದ್ದೇ ಪ್ರಮುಖ ಕಾರಣವಾಗಿದೆ. ಈಗ ಸುತ್ತೋಲೆ ಹೊರಡಿಸಿ ಮಧ್ಯಮ ವರ್ಗದ ಬೀದಿ ವ್ಯಾಪಾರಿಗಳನ್ನು ಮತ್ತು ಕಿರಾಣಿ ಅಂಗಡಿ ಮಾಲೀಕರ ಕುಟುಂಬಗಳನ್ನು ಬೀದಿಗೆ ತಳ್ಳಲಾಗುತ್ತಿದೆ ಎಂದು ಶಾಸಕರು ಕಿಡಿಕಾರಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ 3 ಲಕ್ಷ ಬೀದಿಬದಿ ವ್ಯಾಪಾರಿಗಳಿದ್ದಾರೆ. ಕೆಲ ಮೂಲಗಳ ಪ್ರಕಾರ, 4 ಲಕ್ಷ ಎನ್ನಲಾಗುತ್ತಿದೆ. ಅಂದರೆ 20 ಲಕ್ಷ ಮಂದಿ ಜೀವನ ಸಾಗಿಸುತ್ತಿದ್ದಾರೆ. ಈಗ ಈ ವ್ಯಾಪಾರಿಗಳು ವ್ಯಾಪಾರ ಮುಂದುವರಿಸಬೇಕಾದರೆ 40 ಅಡಿ ರಸ್ತೆಗೆ ಸ್ಥಳಾಂತರವಾಗಬೇಕೇ? ಇದು ಆ ಮಧ್ಯಮ ವರ್ಗದ ಜನಕ್ಕೆ ಸಾಧ್ಯವೇ? ಮತ್ತು 40 ಅಡಿಯ ರಸ್ತೆಯೇ ಇಲ್ಲದ ವಸತಿ ಪ್ರದೇಶದ ಜನರು ತಮ್ಮ ದಿನನಿತ್ಯದ ಅಗತ್ಯ ಸರಕುಗಳಾದ ತರಕಾರಿ, ಹಣ್ಣು ಮತ್ತು ಹಾಲು ಮೋಸರು, ಔಷಧ ಇತ್ಯಾದಿ ವಸ್ತುಗಳ ಖರೀದಿಗೆ 40 ಅಡಿಯ ರಸ್ತೆಗಳನ್ನು ಹುಡುಕಿ ಹೋಗಬೇಕೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಸಂಸ್ಥೆಗಳು ಶೋಷಿತರ, ಬಡ ಮತ್ತು ಮಧ್ಯಮ ವರ್ಗದವರ ಪಾಲಿಗೆ ಬೆಳಕಾಗಿ ಅವರ ಆರ್ಥಿಕ ಪರಿಸ್ಥಿಯನ್ನು ಮೇಲೆತ್ತಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು. ಆದರೆ ಅಂತಕರಣಃ ಇಲ್ಲದ ಮತ್ತು ಸೂಕ್ಷ್ಮ ಸಂವೇದನೆಯಿಲ್ಲದ ನಿಮ್ಮ ಸುತ್ತೋಲೆ ಮತ್ತಷ್ಟು ಶೋಷಿತರನ್ನಾಗಿಸುವುದರ ಜತೆಗೆ ಮತ್ತು ಬಡತನಕ್ಕೆ ದೂಡುವುದರಲ್ಲಿ ಸಂಶಯಕ್ಕೆ ಕಾರಣವಾಗಿದೆ ಎಂದು ಎಸ್. ಸುರೇಶ್‌ಕುಮಾರ್ ಆರೋಪಿಸಿದ್ದಾರೆ.