ಕೊಡವ ಭವನದಲ್ಲಿ ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಶನ್ ಅಸೋಸಿಯೇಷನ್ ಏರ್ಪಡಿಸಿದ್ದ ಚಿಂತನಾ ಸಭೆಯಲ್ಲಿ ಮಂಜು ಚಿಣ್ಣಪ್ಪನವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಜಯ ಚಿಣ್ಣಪ್ಪ, ಮಾದಯ್ಯ, ಬೋಸ್ ಅಯ್ಯಪ್ಪ ಇತರರಿದ್ದರು. 
ರಾಜ್ಯ

ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯಲ್ಲಿ ಶಾಸಕ ಪೊನ್ನಣ್ಣ ಕೊಡುಗೆ ಅಪಾರ

ಪೊನ್ನಂಪೇಟೆ: ಶಾಸಕ ಎ.ಎಸ್.ಪೊನ್ನಣ್ಣನ ಅವರ ಪ್ರಯತ್ನದಿಂದಾಗಿ ರಾಜ್ಯ ಸರ್ಕಾರ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಇದು ಯುನೈಟೆಡ್ ಕೊಡವ ಆರ್ಗನೈಸೇಷನ್-ಯುಕೊ ಸಂಘಟನೆಯ ಪರಿಕಲ್ಪನೆ ಹಾಗೂ ಹೊರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ. ಕೊಡವರು ಇದನ್ನು ಸಮಗ್ರವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು.
ಅರೆಕಾಡು-ಹೊಸ್ಕೇರಿ ಗ್ರಾಮದಲ್ಲಿ ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಶನ್ ಅಸೋಸಿಯೇಷನ್ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಕೊಡವ ಭವನದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ಏರ್ಪಡಿಸಿದ್ದ ಚಿಂತನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್‌ನಲ್ಲಿ ಕೊಡವರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಘೋಷಿಸುವಂತಾಗಿದೆ. ಇದನ್ನು ಕೊಡವರು ಸದಾ ಮನಸಿನಲ್ಲಿಟ್ಟುಕೊಳ್ಳಬೇಕಾಗಿದೆಯೆಂದು ಹೇಳಿದರು.
ಜಗತ್ತು ಕೊಡವರು ವಿಶಿಷ್ಟ ಜನಾಂಗವೆಂಬ ಬಿರುದನ್ನು ನೀಡಿದ್ದು, ಇದನ್ನು ಪ್ರತಿಯೊಬ್ಬ ಕೊಡವರೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ, ಕೊಡವರು ತಮ್ಮ ನೆಲ ಜಲ. ಭಾಷೆ, ಪರಂಪರೆ ಹಾಗೂ ಸಂಸ್ಕೃತಿಯೆಡೆಗೆ ನಿರ್ಲಕ್ಷೃ ವಹಿಸಿದರೆ ಕೊಡವರ ವೈಶಿಷ್ಟೃತೆ ಉಳಿಯಲು ಸಾಧ್ಯವಿಲ್ಲ. ಕೇವಲ ತೋರಿಕೆಯ ಕೊಡವಾಮೆಯಿಂದ ಯಾವುದೇ ಪ್ರಯೋಜನವಿಲ್ಲ. ಕೊಡವಾಮೆಯ ಸಮಗ್ರತೆಯೊಂದಿಗೆ ಜೀವಿಸಬೇಕು. ಹಾಗಿದ್ದಾಗ ಮಾತ್ರವೇ ಕೊಡವಾಮೆಯ ಮಹತ್ವ ಹಾಗೂ ವೈಶಿಷ್ಟ್ಯತೆ ಅನುಭವಕ್ಕೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಇಂದಿನ ಹಿರಿಯರು ಮುಂದಿನ ಪೀಳಿಗೆಗೆ ಮೇಲ್ಪಂಕ್ತಿಯನ್ನು ಹಾಕಿಕೊಡುವ ಅನಿವಾರ್ಯತೆ ಇದೆ ಎಂದು ಅವರು ಪ್ರತಿಪಾದಿಸಿದರು.
ಸಭೆಯ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಶನ್ ಅಸೋಸಿಯೇಷನ್ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಕೊಡವ ಭವನ ಸ್ಥಾಪಿಸಿದರ ಹಿಂದೆ ಅರೆಕಾಡು ಹೊಸ್ಕೇರಿ ಗ್ರಾಮದ ಕೊಡವರು ಒಗ್ಗಟ್ಟಿನಿಂದ ಸೇರಿ ಕೊಡವ ಜನಾಂಗದ ಏಳಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸ್ಪಷ್ಟ ಉದ್ದೇಶವಿದೆ. ಅದಕ್ಕೆ ಪೂರಕವಾಗಿ ಇಂದಿನ ಈ ಚಿಂತನಾ ಸಭೆಯನ್ನು ಏರ್ಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಚಿಂತನೆಯಿದೆ ಎಂದು ಹೇಳಿದರು.
ಇದೇ ಸಂದರ್ಭ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಯುಕೊ ಸದಸ್ಯರಾದ ನೆಲ್ಲಮಕ್ಕಡ ಮಾದಯ್ಯ, ತೀತಿಮಾಡ ಬೋಸ್ ಅಯ್ಯಪ್ಪ, ಪುದಿಯೊಕ್ಕಡ ದಿನೇಶ್ ಮತ್ತು ಅರೆಕಾಡು ಹೊಸ್ಕೇರಿ ಕೊಡವ ವೆಲ್ಫೇರ್ ಮತ್ತು ರಿಕ್ರಿಯೇಶನ್ ಅಸೋಸಿಯೇಷನ್ ಸದಸ್ಯರು ಉಪಸ್ಥಿತರಿದ್ದರು.