ಶಾಸಕ ಚಂದ್ರು ಲಮಾಣಿ ಮತ್ತು ಗುತ್ತಿಗೆದಾರ ವಿಜಯ್ ಆಡಿಯೋ ವೈರಲ್
- ಲಂಚ ಪ್ರಕರಣದಲ್ಲಿ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಆಪ್ತ ಸಹಾಯಕ ಲೋಕಾ ಬಲೆಗೆ
- ಶಾಸಕ ಚಂದ್ರು ಲಮಾಣಿ ವಿರುದ್ಧವೂ ಗಂಭೀರ ಆರೋಪ
- ಚಂದ್ರು ಮತ್ತು ಗುತ್ತಿಗೆದಾರ ನಡುವೆ ನಡೆದ ಸಂಭಾಷಣೆ ಆಡಿಯೋ ವೈರಲ್
ಗದಗ: ಲಂಚ ಪ್ರಕರಣದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದು ಆರೋಪಿ ಸ್ಥಾನದಲ್ಲಿ ನಿಂತಿರುವ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರ ಆಪ್ತ ಸಹಾಯಕರಾದ ಮಂಜು ವಾಲ್ಮೀಕಿ ಮತ್ತು ಗುರು ಲಮಾಣಿಯನ್ನು ತಡರಾತ್ರಿ 2 ಗಂಟೆಗೆ ಗದಗ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಈ ಸಮಯದಲ್ಲಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಕ್ಸಮರ ತಳ್ಳಾಟ ನಡೆದಿದ್ದು, ಕೆಲ ಸಮಯ ಸ್ಥಳದಲ್ಲಿ ಹೈಡ್ರಾಮಾವೇ ಸೃಷ್ಟಿಯಾಯಿತು.
ಆರೋಗ್ಯ ತಪಾಸಣೆ ನಂತರ ಮೂವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯಲಾಗಿತು. ಒಂದೇ ಪ್ರಕರಣ ಆಗಿದ್ದರಿಂದ ಆಪ್ತ ಸಹಾಯಕರನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ. ಭಾನುವಾರ ಕೋರ್ಟ್ ರಜೆ ಇರುವ ಕಾರಣ ನ್ಯಾಯಾಧೀಶರ ಗೃಹ ಕಚೇರಿಯಲ್ಲಿ ಚಂದ್ರು ಲಮಾಣಿ ಮತ್ತು ಇತರರನ್ನು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕೇಳುವ ಸಾಧ್ಯತೆ ಇದೆ.
ಸ್ಫೋಟಕ ಆಡಿಯೋ ವೈರಲ್
ಗುತ್ತಿಗೆದಾರ ವಿಜಯ ಪೂಜಾರ್ ಎಂಬಾತನಿಂದ 5 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾ ಬಲೆಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಲಮಾಣಿ ಆಪ್ತ ಸಹಾಯಕ ಪ್ರಕರಣ ಬೆನ್ನಲ್ಲೇ ಜಿಲ್ಲೆಯ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಬಿರುಸಿನ ವಾಗ್ವಾದ ಭುಗಿಲೆದ್ದಿದೆ. ಚಂದ್ರು ಲಮಾಣಿಯನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ಓರ್ವ ಸ್ವಾಮೀಜಿಯ ಆಡಿಯೋ ಬಹಿರಂಗವಾದ ಕೂಡಲೇ ಚಂದ್ರು ಲಮಾಣಿ ಮತ್ತು ಗುತ್ತಿಗೆದಾರ ವಿಜಯ್ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಡಿಯೋದಲ್ಲಿ ಕಾಮಗಾರಿ ಗುತ್ತಿಗಾಗಿ ಕಮಿಷನ್ ಪಡೆಯುವ ವಿಷಯಗಳೂ ಚರ್ಚೆಯಾಗಿವೆ. ವೈರಲ್ ಆಡಿಯೋದಲ್ಲಿ ಏನೆಲ್ಲ ಮಾತುಕತೆ ಆಗಿದೆ? ಎಂಬುದು ಈ ಕೆಳಗಿನ ಸಂಭಾಷಣೆಯಲ್ಲಿದೆ ನೋಡಿ.
ಚಂದ್ರು (ಶಾಸಕ): ನನಗ್ ಹೀಂಗ ಮಾಡಿದ್ರೆ ನಿನ್ನ ಬೆನ್ನು ಮೂಳೆ ಮುರಿಸುತ್ತೀನಿ. ನನಗಹಹಹ.. ಎನ್ ನೀ ನನ್ನ ಲೂಸ್ ಅಂತ ತಿಳ್ಕೊಂಡಿಯಾ ನೀನು? ಪ್ರೀತಿ-ವಿಶ್ವಾಸದಿಂದ ಹೇಳಿದ್ರ ಇಂತದೆಲ್ಲಾ ನಾಟಕ ಮಾಡ್ತಿಯಾ ನೀನು? ಸುಳ್ಳ ಹೇಳ್ತಿಯಾ ನೀನು. ಮಲ್ಲಮಗ ಹೋಗಿನಿ, ಎಲ್ಲಮ್ಮಗ ಹೋಗಿನಿ, ಹೊಳೆಲಮ್ಮಗ ಹೋಗಿನೆ(ಜಾತ್ರೆಗೆ) ಹೋಗಿನಿ ಅಂತ ಸುಳ್ಳ ಹೇಳ್ತಿಯಾ ನೀನು? ನಿನ್ ತಾಲೂಕಾದ ಇಂತದ್ದೆಲ್ಲ ಇಟ್ಕೊ. ನನ್ ತಾಲೂಕುದಾಗ ಮಾಡಿದ್ರೆ ಮೂಳೆ ಮುರಿದು ಕಳಿಸುತ್ತೀನಿ..
ಹೀಗಿದೆ ಸಂಭಾಷಣೆ...
ವಿಜಯ ಪೂಜಾರ (ಗುತ್ತಿಗೆದಾರ): ಸರ್, ನಂದು ತಪ್ಪಾಗೆತಿ. ಅಂದ್ರೆ ಅದು (ಟೆಂಡರ್) ಬೇರೆಯವರಿಗೆ ಆಗೈತಿ...
ಚಂದ್ರು ಲಮಾಣಿ: ಎಯ್, ಬಿಡೋ ನೀನು?! ಅದೇನು (ಟೆಂಡರ್) ಬೇರೆಯವರ ಹೆಸರಿಗೆ ಆಗೈತಾ? ಯಾರ್ ಹೆಸರಿಗೆ ಅಗೈತಿ ಅದು (ಟೆಂಡರ)?
ವಿಜಯ ಪೂಜಾರ: ನನ್ ಹೆಸರಿಗೆ ಆಗೈತಿ ಸರ್.
ಚಂದ್ರು ಲಮಾಣಿ: ಹು ಮತ್ತ.. ಎನ್ ಮಾಡ್ಬೇಕ ಅದಕ್ಕ?
ಗುರು ಪೂಜಾರ: ಅಂದ್ರ ಸರ್, ನಾವು ಎರಡಕ್ಕೆ (ಎರಡು ಲಕ್ಷ ರೂ.) ಹೇಳಿದ್ರಿ ಸರ್.. ಅದು ನಿಮಗ ಕನ್ಫ್ಯೂಸ್ ಆಗೈತಿ ಸರ್.
ಚಂದ್ರು ಲಮಾಣಿ: ಎನ್ ಎರಡು, (ಎರಡು ಲಕ್ಷ ರೂ.) ನಂಗೇನ್ ಪಟ್ಟಿ ತಂದು ಕೊಟ್ಟಿಯಾ? ಗೊಂದಲ ಮಾಡಾಕ?
ಚಂದ್ರು ಲಮಾಣಿ: ಎಯ್ ಬಿಡೋ! 2 (ಲಕ್ಷ) ಹೇಳ್ತಾನಂತ, ನಂಗ ಕನ್ಫ್ಯೂಸ್ ಆಗೈತಂತ... ಎಯ್ ಐದ್(5).... (ಆಡಿಯೋ ಸ್ಥಗಿತ)
ಹೀಗೆ ಸಂಭಾಷಣೆ ಇರುವ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯ ಪೂಜಾರ, ಜಿಲ್ಲೆಯ ಮುಳಗುಂದ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸದಸ್ಯ ಆಗಿರುವ ಹಿನ್ನೆಲೆ ಲಂಚ ಪ್ರಕರಣ ಈಗ ರಾಜಕೀಯ ವಲಯದಲ್ಲಿ ಮಹತ್ವದ ತಿರುವು ಪಡೆದುಕೊಂಡಿದೆ. ಮುಂದುವರಿದ ಶಾಸಕ ಚಂದ್ರು ಲಮಾಣಿ ರಾಜೀನಾಮೆ ಆಗ್ರಹಿಸಿ ಶಿರಹಟ್ಟಿ ತಾಲೂಕು ಕಾಂಗ್ರೆಸ್ ಘಟಕ ಇಂದು ಪ್ರತಿಭಟನೆ ಹಮ್ಮಿಕೊಂಡಿದೆ.