High court 
ರಾಜ್ಯ

ಅಂಗವಿಕಲರ ಕಾಯ್ದೆ ದುರ್ಬಳಕೆ ಸಲ್ಲ| High court

ಪ್ರಮುಖ ಮುಖ್ಯಾಂಶಗಳು

  • ನೋಟಿಸ್​ ರದ್ದುಗೊಳಿಸಿ ಹೈಕೋರ್ಟ್​ ಎಚ್ಚರಿಕೆ
ಬೆಂಗಳೂರು: ಸಾಮಾಜಿಕ ಹಿತಕ್ಕಾಗಿ ಮಾಡಿರುವ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಇಂತಹ ಪ್ರವೃತ್ತಿಗಳು ಮುಂದುವರಿದರೆ ನಿಜವಾಗಿಯೂ ಅದರ ಅವಶ್ಯಕತೆಯಿರುವವರಿಗೆ ಪ್ರಯೋಜನಗಳು ಸಿಗುವುದಿಲ್ಲ ಎಂದು ಹೈಕೋರ್ಟ್​ ಹೇಳಿದೆ.
ಅಂಗವಿಕಲ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಅಪಾರ್ಟ್​ಮೆಂಟ್​ ಒಂದರ ನಿವಾಸಿಗಳಿಗೆ ರಾಜ್ಯ ಅಂಗವಿಕಲರ ಹಕ್ಕುಗಳ ಆಯುಕ್ತರು ನೀಡಿದ್ದ ಎಚ್ಚರಿಕೆ ನೋಟಿಸ್​ ಅನ್ನು ರದ್ದುಪಡಿಸುವಾಗ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ. ಭವಿಷ್ಯದಲ್ಲಿ ಇಂತಹ ದೂರುಗಳನ್ನು ಪರಿಶೀಲಿಸುವಾಗ ಆಯುಕ್ತರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದೆ.
ನಿರ್ವಹಣಾ ಶುಲ್ಕ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ದೂರುದಾರರ ಹೆಸರನ್ನು ಅಪಾರ್ಟ್​ಮೆಂಟ್​ನ ವಾಟ್ಸಾಪ್​ ಗ್ರೂಪ್​ನಲ್ಲಿ ಹಾಕಲಾಗಿತ್ತು. ಸಿಸಿಟಿವಿ ಅಳವಡಿಕೆ ಮತ್ತು ಇತರ ವಿಷಯಗಳ ಬಗ್ಗೆ ದೂರುದಾರರಿಗೆ ಇತರ ನಿವಾಸಿಗಳೊಂದಿಗೆ ಸಣ್ಣಪುಟ್ಟ ಮನಸ್ತಾಪಗಳಾಗಿದ್ದವು. ಇದನ್ನು  ಉಲ್ಲೇಖಿಸಿ ತಮ್ಮ ವಿರುದ್ಧ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ದೂರು ನೀಡಲಾಗಿತ್ತು. ಈ ಬಗ್ಗೆ ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ಆಯುಕ್ತರು ನೋಟಿಸ್​ ಜಾರಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. 

ಸೌಹಾರ್ದಯುತ ಪರಿಹಾರ:

ಅಪಾರ್ಟ್​ಮೆಂಟ್​ನಂತಹ ವ್ಯವಸ್ಥೆಯಲ್ಲಿ ಬದುಕುವಾಗ ಪರಸ್ಪರ ಹೊಂದಾಣಿಕೆ ಇರಬೇಕು. ಇಂತಹ ಸಣ್ಣಪುಟ್ಟ ವಿಚಾರಗಳಿಗೆ ನಿಯಮಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ನಿರ್ವಹಣಾ ಶುಲ್ಕ ಪಾವತಿಸದವರ ಹೆಸರುಗಳನ್ನು ವಾಟ್ಸಾಪ್​ ಗುಂಪಿನಲ್ಲಿ ಹಾಕುವುದು ಅಥವಾ ನೋಟಿಸ್​ ಬೋರ್ಡ್​ನಲ್ಲಿ ಪ್ರಕಟಿಸುವುದು ಕಿರುಕುಳವಾಗುವುದಿಲ್ಲ. ಇದು ಮಾಹಿತಿ ನೀಡುವ ಪ್ರಕ್ರಿಯೆ ಅಷ್ಟೆ. ಇವುಗಳಿಗಾಗಿ ಅಂಗವಿಕಲರ ಹಕ್ಕುಗಳ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಎಚ್ಚರಿಸಿದೆ.