- ಸೊಸೆ ವಿರುದ್ಧದ ಪ್ರಾಧಿಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್
- ಮನೆಯಿಂದ ಹೊರ ಹಾಕುವುದೇ ಏಕೈಕ ಪರಿಹಾರವಲ್ಲ
ಬೆಂಗಳೂರು:
ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಪ್ರತಿ ಪ್ರಕರಣದಲ್ಲೂ ಮನೆಯಿಂದ ಹೊರ ಹಾಕುವುದೇ ಏಕೈಕ ಪರಿಹಾರವಲ್ಲ ಎಂದು ಹೈಕೋರ್ಟ್ ಹೇಳಿದೆ.
ವಿಧವೆ ಸೊಸೆ ಮತ್ತು ಅಪ್ರಾಪ್ತ ಮಕ್ಕಳನ್ನು ಮನೆಯಿಂದ ಹೊರಹೋಗುವಂತೆ ಅತ್ತೆ ಪರವಾಗಿ ಆದೇಶಿಸಿದ್ದ ಹಿರಿಯ ನಾಗರಿಕರ ನಿರ್ವಹಣಾ ಪ್ರಾಧಿಕಾರದ ಆದೇಶ ರದ್ದುಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯಪಟ್ಟಿದೆ. ತಮ್ಮ ವಿರುದ್ಧದ ಮನೆ ತೆರವು ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ.
ಕಾಯ್ದೆಯು ಹಿರಿಯ ನಾಗರಿಕರ ಜೀವ ಮತ್ತು ನೆಮ್ಮದಿಯ ರಕ್ಷಣೆಗೆ ಮಾತ್ರ ಸೀಮಿತವಾಗಿದ್ದು, ಆಸ್ತಿ ಹಕ್ಕಿನ ಬಗ್ಗೆ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯ ಬಾಕಿ ಇರುವಾಗ ಸೊಸೆಯನ್ನು ಬಲವಂತವಾಗಿ ತೆರವುಗೊಳಿಸಲು ಇದನ್ನು ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಪತಿಯ ಮರಣದ ನಂತರ ವಿವಾದ:
ಅರ್ಜಿದಾರ ಮಹಿಳೆಯು 2013ರಲ್ಲಿ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ವಿವಾದಿತ ಆಸ್ತಿಯನ್ನು ಮಹಿಳೆಯ ಪತಿ ಮತ್ತು ಅತ್ತೆಯ ಹೆಸರಿಗೆ ಪತಿಯ ಸಹೋದರ 2018ರಲ್ಲಿ ದಾನಪತ್ರದ ಮೂಲಕ ನೀಡಿದ್ದರು. 2020ರಲ್ಲಿ ಪತಿಯು ನಿಧನರಾದ ನಂತರ, ಅತ್ತೆ&ಸೊಸೆ ನಡುವೆ ಆಸ್ತಿ ವಿಚಾರವಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದ್ದರಿಂದ ಏಕ್ಷಪಯವಾಗಿ ನಿರ್ಧಾರ ತೆಗೆದುಕೊಂಡಿದ್ದ ಅತ್ತೆ, ದಾನಪತ್ರವನ್ನು ಅದನ್ನು ನೀಡಿದ ಮಗನಿಗೆ ಹಸ್ತಾಂತರಿಸಲು ಪ್ರಯತ್ನಿಸಿದ್ದರು.
ಸೊಸೆಯು ತನ್ನ ಮತ್ತು ಮಕ್ಕಳ ಪಾಲು ಕೋರಿ ಸಿವಿಲ್ ದಾವೆ ದೂಡಿದ್ದರೆ, ಮೊದಲು ದಾನಪತ್ರ ನೀಡಿದ್ದ ಪತಿಯ ಸದೋದರ ಕೂಡ ತಾನೇ ಆಸ್ತಿಯ ಮಾಲೀಕ ಎಂದು ಪ್ರತ್ಯೇಕ ದಾವೆ ಹೂಡಿದ್ದರು. ಈ ವ್ಯಾಜ್ಯಗಳು ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಹಿರಿಯ ನಾಗರಿಕರ ನಿರ್ವಹಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದ ಅತ್ತೆಯು ಸೊಸೆ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳನ್ನು ಮನೆಯಿಂದ ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಇದನ್ನು ಪ್ರಾಧಿಕಾರವು ಪರಿಗಣಿಸಿತ್ತು. ಈ ಆದೇಶವನ್ನು ಸೊಸೆಯು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
⚠️
ಪ್ರತ್ಯೇಕ ವಾಸಕ್ಕೆ ಅವಕಾಶ
ಪ್ರತಿ ಪ್ರಕರಣದಲ್ಲೂ ಹಿರಿಯ ನಾಗರಿಕರು ದೂರು ಕೊಟ್ಟಾಕ್ಷಣ ಇತರರನ್ನು ಮನೆಯಿಂದ ಹೊರಹಾಕುವುದೊಂದೇ ಪರಿಹಾರವಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು. ಪತಿಯ ನಿಧನದ ನಂತರ ಆ ಮನೆಯಲ್ಲಿ ವಾಸಿಸುತ್ತಿರುವ ಪತ್ನಿ ಮತ್ತು ಮಕ್ಕಳ ಹಕ್ಕನ್ನು ರ್ನಿಲಸಿ ತೆರವು ಆದೇಶ ನೀಡುವುದು ಸರಿಯಲ್ಲ. ಅತ್ತೆ ಮತ್ತು ಸೊಸೆ ಒಂದೇ ಕಟ್ಟಡದ ವಿಭಿನ್ನ ಮಹಡಿಗಳಲ್ಲಿ ಪ್ರತ್ಯೇಕವಾಗಿ ವಾಸಿಸಲು ಅವಕಾಶವಿರುವುದರಿಂದ ಸೊಸೆಯನ್ನು ಹೊರಹಾಕಿದ್ದು ಸರಿಯಲ್ಲ. ಆಸ್ತಿ ವಿವಾದಗಳನ್ನು ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.