- ಚಿಲ್ಲರೆ ಹಾಗೂ ಸಗಟು ಔಷದ ವ್ಯಾಪಾರಿಗಳ ದೂರು
- ಫಾರ್ಮಸಿ ಕೋರ್ಸ್ ಮಾಡದೆ ಔಷಧ ಮಾರಾಟಕ್ಕೆ ಆಕ್ಷೇಪ
- ಆನ್ ಲೈನ್ ಮೂಲಕವೂ ಮಾರಾಟ ಕ್ರಮಕ್ಕೆ ವಿರೋಧ
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಜೀವ ರಕ್ಷಕ ಔಷಧಿಗಳು ದುರುಪಯೋಗವಾಗದಂತೆ ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪರ್ಮ ರಿಟೈಲರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆ ಒತ್ತಾಯಿಸಿದೆ.
ಚಿಲ್ಲರೆ ಹಾಗೂ ಸಗಟು ಔಷದ ವ್ಯಾಪಾರಿಗಳು ತಮ್ಮ ತಮ್ಮ ವೃತ್ತಿಗಳಲ್ಲಿ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಸರ್ಕಾರಗಳ ಸಚಿವಾಲಯಗಳು ಹಾಗೂ ಇಲಾಖೆಗಳು ಮುಂದಾಗಬೇಕು ಎಂದು ಸಂಸ್ಥೆಯ ಅಧ್ಯಕ್ಷ ಜಯರಾಂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಡ್ರಗ್ಸ್ ಅಂಡ್ ಕಾಸ್ಮಟಿಕ್ ಆಕ್ಟ್ 1940 ಮತ್ತು ರೂಲ್ಸ್, 1945 ಕೇಂದ್ರ ಸರ್ಕಾರದ ಕಾಯ್ದೆಯ ನಿಯಮಗಳ ಅಡಿಯಲ್ಲಿ ಇದುವರೆಗೂ ಪರವಾನಗಿ ಪಡೆದು ರಾಜ್ಯದಲ್ಲಿ ಸರಿಸುಮಾರು 45,000ಕ್ಕೂ ಹೆಚ್ಚು ಔಷಧ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಆಗುತ್ತಿರುವ ಬೆಳವಣಿಗೆ ಆತಂಕಕಾರಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಔಷಧಿ ಮಳಿಗೆಯನ್ನು ಪ್ರಾರಂಭಿಸಬೇಕಾದರೆ ಯಾವುದೇ ಫಾರ್ಮಸಿ ಕೋರ್ಸ್‌ಗಳನ್ನು ಮಾಡದೆ, ಜೀವ ರಕ್ಷಕ ಔಷಧಿಗಳ ಬಗ್ಗೆ ಜ್ಞಾನವಿಲ್ಲದ ಸಾಮಾನ್ಯ ನಾಗರಿಕರು ಔಷಧ ಅಂಗಡಿಯ ಮಾಲೀಕರಾಗಿಯೂ ಹಾಗೂ ಸದರಿ ಮಾಲೀಕರು ಔಷಧಿಗಳನ್ನು ಮಾರಾಟ ಮಾಡಲು ಫಾರ್ಮಸಿ ಮಾಡಿರುವ ನೋಂದಾಯಿತ ಫಾರ್ಮಸಿಸ್ಟ್‌ಗಳನ್ನು ಅರ್ಹತಾ ವ್ಯಕ್ತಿಗಳನ್ನಾಗಿ ನೇಮಿಸಿಕೊಳ್ಳಬೇಕಿದೆ. ಕೆಲವು ಸಂದರ್ಭಗಳಲ್ಲಿ ಅರ್ಹತಾ ವ್ಯಕ್ತಿಯಾದ ನೋಂದಾಯಿತ ಫಾರ್ಮಸಿಸ್ಟ್ ಅನುಪಸ್ಥಿತಿಯಲ್ಲಿ ಔಷಧಿಗಳ ಬಗ್ಗೆ ಜ್ಞಾನವಿಲ್ಲದ ಔಷಧಿ ಅಂಗಡಿಗಳ ಮಾಲೀಕರು ಔಷಧಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಇಂಥಹ ಪ್ರಕರಣದಲ್ಲಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಮೇಲ್ಕಂಡ ಡ್ರಗ್ಸ್ ಕಾಸ್ಮಟಿಕ್ ನಿಯಮಗಳ ಪಕಾರ ಇನ್ನು ಹಲವಾರು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
*ಫಾರ್ಮಸಿ ಕೋರ್ಸ್ ಮಾಡದೆ ಇರುವವರು ಮತ್ತು ಅರ್ಹತಾ ವ್ಯಕ್ತಿಗಳನ್ನಾಗಿ ನೇಮಿಸಿಕೊಳ್ಳದೆ ಇರುವವರು ಔಷಧ ಮಾರಾಟಕ್ಕೆ ಆಕ್ಷೇಪವಿದೆ. ಆನ್ ಲೈನ್ ಮೂಲಕವೂ ಮಾರಾಟ ಕ್ರಮಕ್ಕೆ ವಿರೋಧವಿದೆ. -ಜಯರಾಂ, ಅಧ್ಯಕ್ಷರು, ಕರ್ನಾಟಕ ಪರ್ಮ ರಿಟೈಲರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆ