ರಣದೀಪ್ ಸಿಂಗ್ ಸುರ್ಜೇವಾಲ, ರಾಮಲಿಂಗಾ ರೆಡ್ಡಿ 
ರಾಜ್ಯ

ತಪ್ಪು ಗ್ರಹಿಕೆ; ಸಚಿವ ರಾಮಲಿಂಗಾ ರೆಡ್ಡಿ ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದಾರೆ: ರಣದೀಪ್ ಸಿಂಗ್ ಸುರ್ಜೇವಾಲ | Ramalinga Reddy

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪ್ರಮಾಣವಚನ ಸ್ವೀಕರಸಿದ ಒಂದೇ ದಿನದ ಬಳಿಕ ರಾಜೀನಾಮೆ ನೀಡಿ ಡಿಕೆಶಿ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಹಿರಿಯ ಸಚಿವ ರಾಮಲಿಂಗ ರೆಡ್ಡಿ, ಇಂದು(ಜೂ. 06) ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದಾರೆ.
ಈ ಕುರಿತು ಮಾತನಾಡಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ, ರಾಮಲಿಂಗಾ ರೆಡ್ಡಿಯವರು ನಮ್ಮ ಪಕ್ಷದ ಹಿರಿಯ ನಾಯಕರು, ಎಂಟು ಬಾರಿ ಶಾಸಕರಾಗಿದ್ದಾರೆ. ಅವರು ನಮ್ಮ ಪಕ್ಷದ ಪ್ರಮುಖರು. ಅವರ ಅನುಭವ ನಮ್ಮ ಪಕ್ಷಕ್ಕೆ ಅಮೂಲ್ಯವಾದದ್ದು. ತಪ್ಪು ಗ್ರಹಿಕೆಯಿಂದ ರಾಜೀನಾಮೆ ನೀಡಿದ್ದರು. ಈಗ ಎಲ್ಲವೂ ಸರಿಯಾಗಿದ್ದು, ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ವಾಸ್ತವವಾಗಿ, ರಾಜ್ಯದಲ್ಲಿ ಸುಗಮವಾಗಿ ನಾಯಕತ್ವ ಬದಲಾವಣೆಯಿಂದ ಬಿಜೆಪಿ ಆಘಾತಕ್ಕೊಳಗಾಗಿದೆ. ಅವರು ಕಾಂಗ್ರೆಸ್ ಅನ್ನು ಅಸ್ಥಿರಗೊಳಿಸಲು ಮತ್ತು ಪರಿಸ್ಥಿತಿಯ ಲಾಭ ಪಡೆಯಲು ಬಯಸಿದ್ದರು. ಆದರೆ ಅದ್ಯಾವುದು ನಡೆಯಲಿಲ್ಲ ಎಂದಿದ್ದಾರೆ.
ಇದನ್ನೂ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ್ದ ಸಿಎಂ ಡಿಕೆಶಿ, ರಾಮಲಿಂಗಾ ರೆಡ್ಡಿ ನನ್ನ ಆತ್ಮೀಯ ಸ್ನೇಹಿತರು. ಅವರ ಅಸಮಾಧಾನದ ವಿಷಯ ಈಗ ಸಂಪೂರ್ಣವಾಗಿ ಇತ್ಯರ್ಥವಾಗಿದೆ. ಮಾಧ್ಯಮಗಳು ಕೇವಲ ಸ್ಟೋರಿಗಳಿಗಾಗಿ ಇಲ್ಲದ ಸುದ್ದಿಗಳನ್ನು ಸೃಷ್ಟಿಸಬೇಡಿ, ನೀವೇನೇ ಮಾಡಿದ್ರೂ ಅದೆಲ್ಲವೂ ಹುಸಿಯಾಗುತ್ತವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಆಂತರಿಕ ಗೊಂದಲಕ್ಕೆ ತೆರೆ ಎಳೆದಿದ್ದರು.
ಕಳೆದ ಸರ್ಕಾರದಲ್ಲೂ ಬೆಂಗಳೂರು ಅಭಿವೃದ್ಧಿ ಖಾತೆ ಬಗ್ಗೆ ಕಣ್ಣಿಟ್ಟಿದ್ದ ರಾಮಲಿಂಗಾರೆಡ್ಡಿಯವರಿಗೆ ಸಿಕ್ಕಿರಲಿಲ್ಲ. ಆಗ ಖಾತೆಯನ್ನು ಡಿಸಿಎಂ ಆಗಿದ್ದ ಡಿಕೆಶಿಯವರು ಪಡೆದುಕೊಂಡಿದ್ದರು. ಅದು ಅಸಮಾಧಾನಗೊಂಡಿದ್ದ ಅವರನ್ನು ಡಿಕೆಶಿ ಮತ್ತು ಅವರ ಸಹೋದರ ಡಿ.ಕೆ.ಸುರೇಶ್ ಸಮಾಧಾನ ಪಡಿಸಿದ್ದರು. ಮುಂದೆ ನಾನು ಸಿಎಂ ಆದ ವೇಳೆ ನಿಮಗೆ ಆ ಖಾತೆ ಕೊಡುತ್ತೇನೆ ಎಂದು ಮಾತುಕೊಟ್ಟಿದ್ದರು ಎನ್ನಲಾಗಿದೆ.
ಆದರೆ ಡಿಕೆಶಿ ಸಿಎಂ ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಮಲಿಂಗಾರೆಡ್ಡಿಯವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಅವರು ಬೇಕಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವ ಕೃಷ್ಣಬೈರೇಗೌಡ ನೀಡಲಾಗಿದೆ. ಇದರಿಂದ ಬೇಸರಗೊಂಡಿದ್ದ ಅವರು ರಾಜೀನಾಮೆ ನೀಡಿದ್ದರು. ಈಗ ಹೈಕಮಾಂಡ್ ಮಧ್ಯ ಪ್ರವೇಶದಿಂದ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ (ಏಜೆನ್ಸೀಸ್).