ಕಲ್ಯಾಣ ಕರ್ನಾಟಕ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಪರಿಹಾರ 
ರಾಜ್ಯ

ಕಲ್ಯಾಣ ಕರ್ನಾಟಕ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಮಿಷನ್ 40+ ಯೋಜನೆ

ಪ್ರಮುಖ ಮುಖ್ಯಾಂಶಗಳು

  • ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ವಿಭಾಗದ 7 ಜಿಲ್ಲೆಗಳ 1,345 ಸರ್ಕಾರಿ ಪ್ರೌಢಶಾಲೆಗಳ 3.03 ಲಕ್ಷ ಮಕ್ಕಳಿಗೆ ‘ಪರಿಹಾರ ಬೋಧನೆ’ ತರಗತಿ
  • ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ 3.44 ಕೋಟಿ ರೂ. ಅನುದಾನ ಬಿಡುಗಡೆ
  • ಪ್ರತಿ ತಿಂಗಳಿಗೆ ಒಂದು ಸಾವಿರ ರೂ.ಗಳಂತೆ 7 ಸಾವಿರ ಶಿಕ್ಷಕರಿಗೆ ಪ್ರೋತ್ಸಾಹ ಧನ
ಎನ್.ಎಲ್. ಶಿವಮಾದು
ಬೆಂಗಳೂರು: ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊನೇ ಸ್ಥಾನ ಪಡೆಯುತ್ತಿರುವ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಫಲಿತಾಂಶವನ್ನು ಶತಾಯ ಗತಾಯ ಸುಧಾರಿಸಲೇಬೇಕು ಎಂದು ನಿರ್ಧರಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಕರಿಗೆ ಪ್ರೋತ್ಸಾಹ ಧನ ಮತ್ತು ಮಕ್ಕಳು ಪಾಠ ಕೇಳುವುದಕ್ಕೆ ಬರಲು ಸಾರಿಗೆ ವ್ಯವಸ್ಥೆಯನ್ನು ಒಳಗೊಂಡ ‘ಪರಿಹಾರ ಬೋಧನೆ’ ಎಂಬ ತರಗತಿಗಳನ್ನು ನಡೆಸುತ್ತಿದೆ.
2025-26ನೇ ಶೈಕ್ಷಣಿಕ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ವಿಭಾಗದ 7 ಜಿಲ್ಲೆಗಳ 1,345 ಸರ್ಕಾರಿ ಪ್ರೌಢಶಾಲೆಗಳ 3.03 ಲಕ್ಷ ಮಕ್ಕಳಿಗೆ ‘ಪರಿಹಾರ ಬೋಧನೆ’ ತರಗತಿಗಳನ್ನು ಹಮ್ಮಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ತರಗತಿಗಳನ್ನು ‘ಮಿಷನ್ 40+’ ಎಂಬ ಗುರಿ ಹೊಂದಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಇಲಾಖೆಯು ಯೋಜನೆಗಳನ್ನು ರೂಪಿಸಿದರೆ ಅದಕ್ಕೆ ಬೆನ್ನುಲುಬಾಗಿ ಬೇಕಾಗಿರುವ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಬಳಸಿಕೊಳ್ಳಲಾಗುತ್ತಿದ್ದು, 3.44 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಈ ಭಾಗದ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಸಾಯಂಕಾಲ ವಿಶೇಷ ತರಗತಿಗಳನ್ನು ನಡೆಸಿ ಪರಿಹಾರ ಬೋಧನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಎಲ್ಲ 6 ವಿಷಯಗಳ ಶಿಕ್ಷಕರು ಪರಿಹಾರ ಬೋಧನೆ ಕಾರ್ಯದಲ್ಲಿ ಶಿಕ್ಷಕರು ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.

ಕಳೆದ ವರ್ಷ 7 ಜಿಲ್ಲೆಗಳ ಫಲಿತಾಂಶ

2024-25ನೇ ಸಾಲಿನಲ್ಲಿ ಈ ಭಾಗದ 7 ಜಿಲ್ಲೆಗಳು ಸರಾಸರಿ ಶೇ.52.42 ಫಲಿತಾಂಶವನ್ನು ಪಡೆದಿವೆ. ಬಳ್ಳಾರಿ- ಶೇ.59.91, ಬೀದರ್- ಶೇ.52.30, ಕಲಬುರಗಿ- ಶೇ.41.35, ಕೊಪ್ಪಳ- ಶೇ.56.57, ರಾಯಚೂರು- ಶೇ.50.76, ವಿಜಯನಗರ- ಶೇ.66.78 ಮತ್ತು ಯಾದಗಿರಿ- ಶೇ.50.60 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಈ ವರ್ಷ 7 ಜಿಲ್ಲೆಗಳಿಂದ ಒಟ್ಟು 3,03,775 ಮಕ್ಕಳಿದ್ದಾರೆ.

7 ಸಾವಿರ ಶಿಕ್ಷಕರಿಗೆ ಪ್ರೋತ್ಸಾಹ ಧನ

ಪರಿಹಾರ ಬೋಧನೆಗೆ ಕನ್ನಡ ಮಾಧ್ಯಮದ 6 ಶಿಕ್ಷಕರನ್ನು ಹಾಗೂ ಉರ್ದು, ಮರಾಠಿ ಮಾಧ್ಯಮದ ಕನ್ನಡ ಮತ್ತು ಇಂಗ್ಲಿಷ್ ಶಿಕ್ಷಕರನ್ನು ಪರಿಹಾರ ಬೋಧಣೆಗೆ ಬಳಸಿಕೊಳ್ಳಲಾಗುತ್ತಿದೆ.
ಕನ್ನಡಕ್ಕೆ 7158, ಮರಾಠಿ- 78 ಮತ್ತು ಉರ್ದು ವಿಷಯಕ್ಕೆ 226 ಸೇರಿ ಒಟ್ಟು 7462 ಶಿಕ್ಷಕರನ್ನು ಪರಿಹಾರ ಬೋಧನೆಗೆ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಶಿಕ್ಷಕರಿಗೆ ಪ್ರತಿ ತಿಂಗಳಿಗೆ ಒಂದು ಸಾವಿರ ರೂ.ಗಳಂತೆ ಮೂರು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ.
ಇನ್ನೊಂದು ಊರಿನಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ವೆಚ್ಚವಾಗಿ ಪ್ರತಿ ಶಾಲೆಗೆ 6,000 ರೂ. ನೀಡಲಾಗುತ್ತಿದೆ.

ಪ್ರಮುಖ ಸೂಚನೆಗಳು:

- ವಿದ್ಯಾಥೀಗಳಿಗೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಶ್ನೆ ಕೋಠಿ, ನೀಲಿನಕ್ಷೆ, ಪರಿಚಯ, ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಪಠ್ಯ ಆಧಾರಿತ ಸಮಗ್ರ ಪ್ರಶ್ನೆ ಕೋಠಿ (ಎಲ್‌ಬಿಎ) ಪರಿಚಿಯಿಸಿ ಅನುಸರಿಸುವುದು
- ಪರಿಹಾರ ಬೋಧನೆ ತರಗತಿಗಳನ್ನು ಮೂರು ತಿಂಸಳ ಅವಧಿಗೆ ಕಟ್ಟುನಿಟ್ಟಾಗಿ ಪಾಲಿಸುವುದು
- ಯಾವುದೇ ಮಗು ಹಿಂದುಳಿಯದಂತೆ ಮಿಷನ್ 40 ಪ್ಲಸ್ ಅನುಷ್ಠಾನಗೊಳಿಸಿ ಲಿತಾಂಶ ಸುಧಾರಿಸುವುದು. ಹಿಂದುಳಿದ ಮಕ್ಕಳಿಗೆ ಮಾರ್ಗದರ್ಶನ ನೀಡುವುದು.
- ಪ್ರತಿ ದಿನ ಶಾಲಾ ಅವಧಿಯ ಮೊದಲು ಒಂದು ವಿಷಯಕ್ಕೆ ತರಗತಿ ಆಯೋಜಿಸುವುದು ಮತ್ತು ಸಂಜೆ ವೇಳೆ ವಿದ್ಯಾರ್ಥಿಗಳ ಬರವಣಿಗೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಬರವಣಿಗೆಯ ಸಾಮರ್ಥ್ಯ ವೃದ್ಧಿಸಲು ವಿಷಯವಾರು ಮಾದರಿ ಪ್ರಶ್ನೆಪತ್ರಿಕೆ ನೀಡುವುದು
- ಶೇ.90ಕ್ಕಿಂತ ಫಲಿತಾಂಶ ಕಡಿಮೆಯಾಗದಂತೆ ಅಗತ್ಯ ಕ್ರಮ ವಹಿಸುವುದು.