Misappropriation of lakhs of rupees by creating fake bills.
ಕೋಲಾರ: ತಾಲೂಕಿನ ಅಣ್ಣಿಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸವಿತಾ ಅವರು ಹಲವಾರು ನಕಲಿ ಬಿಲ್ಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಜಿಪಂ ಸಿಇಒ ಡಾ. ಪ್ರವಿಣ್ ಪಿ. ಬಾಗೇವಾಡಿ ಅವರಿಗೆ ಜಿಲ್ಲಾ ಜನಪರ ವೇದಿಕೆ ಅಧ್ಯಕ್ಷ ಗೂಳಿಗಾನಹಳ್ಳಿ ನಾಗರಾಜ್ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಪಿಡಿಒ ಸವಿತಾ ಅವರು ಅಣ್ಣಿಹಳ್ಳಿ ಗ್ರಾಪಂಗೆ ಬಂದಾಗಿನಿಂದ ಅನೇಕ ಅವ್ಯವಹಾರಗಳು ನಡೆಸಿದ್ದಾರೆ. ಸಮಸ್ಯೆಗಳ ಬಗ್ಗೆ ಸಾರ್ವಜನಿಕ ಅರ್ಜಿಗಳು ಬಂದಿದ್ದರೂ ಸ್ಪಂದಿಸುತ್ತಿಲ್ಲ. ಹಣದ ಖರ್ಚಿನ ವಿವರಗಳಿಗೆ ಸೂಕ್ತ ದಾಖಲೆಗಳಿಲ್ಲ. ಕುಡಿಯುವ ನೀರಿನ ಮೋಟಾರ್ ದುರಸ್ಥಿ, ಸ್ವಚ್ಛ ವಾಹಿನಿ, ಬೀದಿ ದೀಪಗಳ ಖರೀದಿ, ಇವುಗಳಿಗೆ ಯಾವುದೇ ಸರಿಯಾದ ಬಿಲ್ಲುಗಳಿಲ್ಲದೆ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಅಕ್ರಮವಾಗಿ ಗ್ರಾಮ ಪಂಚಾಯತಿ ನೌಕರರ, ಸದಸ್ಯರ ಖಾತೆಗೆ ಹಾಗೂ ಸದಸ್ಯರ ಪತ್ನಿ ಖಾತೆಗೆ ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಕೆಲವೊಮ್ಮೆ ಅಕ್ರಮಗಳ ಬಗ್ಗೆ ಪ್ರಶ್ನೆ ಕೇಳಲು ಹೋದಾಗ ಸಾರ್ವಜನಿಕರ ಮೇಲೆ ದೌರ್ಜನ್ಯ ಮಾಡಿ ತಮ್ಮ ಮೊಬೈಲ್ ಕ್ಯಾಮರಾದಿಂದ ವಿಡಿಯೋ ಚಿತ್ರೀಕರಿಸಿ ಭಯ ಹುಟ್ಟಿಸುತ್ತಾರೆ ಎಂದು ಆರೋಪಿಸಿದರು.
ಕಚೇರಿಯ ಸ್ವಚ್ಛವಾಹಿನಿ ವಾಹನದ ಹೆಸರಿನಲ್ಲಿ ನಕಲಿ ಪೆಟ್ರೋಲ್ ಬಿಲ್ ತಯಾರಿಸಿ ಹಣ ಡ್ರಾ ಮಾಡಿದ್ದಾರೆ. ಸುಮಾರು 1 ವರ್ಷದಿಂದ ಯಾವುದೇ ಇ&-ಖಾತೆ ಮಾಡಿರುವುದಿಲ್ಲ. ಭ್ರಷ್ಟಾಚಾರ ಮತ್ತು ಹಲವು ಅಕ್ರಮಗಳಲ್ಲಿ ಭಾಗಿಯಾಗಿರುವ ಪಿಡಿಒ ಸವಿತಾ ಅವರನ್ನು ಈ ಕೂಡಲೇ ಬೇರೆ ಕಡೆ ವರ್ಗಾವಣೆ ಮಾಡಬೇಕು ಹಾಗೂ ಪಿಡಿಒ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಿಡಿಒ ವಿರುದ್ಧ ಉಗ್ರವಾದ ಹೋರಾಟ ಮಾಡುವುದಾಗಿ ಗೂಳಿಗಾನಹಳ್ಳಿ ನಾಗರಾಜ್ ಎಚ್ಚರಿಕೆ ನೀಡಿದರು.