ಬಳ್ಳಾರಿ: "ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ಒಂದು ರೀತಿ ಉರಿಯುವ ಮನೆಯಾಗಿದೆ," ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು.
ಕಾನೂನು ಸುವ್ಯವಸ್ಥೆ ವೈಫಲ್ಯ
ರಾಜ್ಯದಲ್ಲಿ ರೇಪ್, ದರೋಡೆ ಮತ್ತು ಗಲಭೆಗಳು ಅವಿಶ್ರಾಂತವಾಗಿ ನಡೆಯುತ್ತಿವೆ. "ಹುಬ್ಬಳ್ಳಿಯಲ್ಲಿ ಮಹಿಳೆಯ ವಿವಸ್ತ್ರೀಕರಣ, ಮೈಸೂರಿನಲ್ಲಿ ವ್ಯಾಪಾರಿ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಶಿಡ್ಲಘಟ್ಟದಲ್ಲಿ ಕಮಿಷನರ್ ವಿರುದ್ಧದ ಅನುಚಿತ ವರ್ತನೆಗಳು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಜನಸಾಮಾನ್ಯರಷ್ಟೇ ಅಲ್ಲದೆ, ಶಾಸಕರಿಗೂ ರಕ್ಷಣೆ ಇಲ್ಲದಂತಾಗಿದೆ," ಎಂದು ಅವರು ಕಳವಳ ವ್ಯಕ್ತಪಡಿಸಿದರು. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರ ಹತ್ಯೆಯ ಪೂರ್ವನಿಯೋಜಿತ ಸಂಚು ನಡೆದಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಗೃಹ ಸಚಿವರ ಅಸ್ತಿತ್ವವೇ ಇಲ್ಲದಂತಾಗಿದೆ ಎಂದರು.
ಭ್ರಷ್ಟಾಚಾರ ಮತ್ತು ಅಧಿಕಾರ ಲಾಲಸೆ
ಸರ್ಕಾರವು ಕೇವಲ ಲಂಚ ಪಡೆಯುವುದು, ಲೂಟಿ ಮಾಡುವುದು ಮತ್ತು ಅಧಿಕಾರ ಹಸ್ತಾಂತರದ ಗೊಂದಲದಲ್ಲಿ ಮುಳುಗಿದೆ. "ಮತದಾರರು ನಮ್ಮನ್ನು ಯಾಕೆ ಗೆಲ್ಲಿಸಿದ್ದಾರೆ ಎನ್ನುವುದನ್ನೇ ಸರ್ಕಾರ ಮರೆತಿದೆ. ಜನರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ, ಇದು ಮತದಾರರಿಗೆ ಮಾಡುವ ಅಪಮಾನ," ಎಂದು ಅಶೋಕ್ ಗುಡುಗಿದರು.
ಸಿಬಿಐ ತನಿಖೆಗೆ ಆಗ್ರಹ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಪ್ರಸ್ತಾಪಿಸಿದ ಅವರು, ಈಗಾಗಲೇ ಸಚಿವ(ಮಾಜಿ) ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದೇವೆ, ಮುಂದಿನ ದಿನಗಳಲ್ಲಿ ಇನ್ನು ಹಲವು ಸಚಿವರು ರಾಜೀನಾಮೆ ನೀಡಲಿದ್ದಾರೆ ಎಂದರು. "ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಸಿಐಡಿಗೆ ನೀಡಿದೆ. ನಮಗೆ ಅದರ ಮೇಲೆ ನಂಬಿಕೆಯಿಲ್ಲ, ಈ ಪ್ರಕರಣವನ್ನು ತಕ್ಷಣವೇ ಸಿಬಿಐಗೆ ವಹಿಸಬೇಕು," ಎಂದು ಒತ್ತಾಯಿಸಿದರು.
ಒಂದು ಹೋರಾಟ ಮುಗಿಯುವ ಮೊದಲೇ ಮತ್ತೊಂದು ಅನಾಹುತ ಸಂಭವಿಸುತ್ತಿದೆ. ಕೋಗಿಲು ಘಟನೆ, ಮಾಲಾಧಾರಿಗಳ ಮೇಲೆ ಹಲ್ಲೆ ಮತ್ತು ಈಗ ಬಳ್ಳಾರಿಯ ಘಟನೆಗಳನ್ನು ಗಮನಿಸಿದರೆ ಸರ್ಕಾರ ಸತ್ತಿದೆಯೇ ಅಥವಾ ಬದುಕಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದರು.