ಬೇಲೂರು ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. 
ರಾಜ್ಯ

ಸಣ್ಣಪುಟ್ಟ ವ್ಯಾಜ್ಯಗಳು ಗ್ರಾಮ ಮಟ್ಟದಲ್ಲೇ ಬಗೆಹರಿಯಲಿ

ಪ್ರಮುಖ ಮುಖ್ಯಾಂಶಗಳು

  • ಬಕ್ರೀದ್ ಹಾಗೂ ಇತರ ಹಬ್ಬಗಳ ಹಿನ್ನೆಲೆ
  • ಬೇಲೂರು ಪೊಲೀಸ್ ಠಾಣೆ
ಬೇಲೂರು: ಬಕ್ರೀದ್ ಹಾಗೂ ಇತರ ಹಬ್ಬಗಳ ಹಿನ್ನೆಲೆಯಲ್ಲಿ ಬೇಲೂರು ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಐ ರೇವಣ್ಣ, ತಾಲೂಕಿನಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ತಿಂಗಳಲ್ಲೇ 143 ಎಫ್‌ಐಆರ್ ದಾಖಲಾಗಿವೆ. ಕಳೆದ ವರ್ಷ 292 ಪ್ರಕರಣಗಳಿದ್ದರೆ, ಈ ವರ್ಷ 350 ದಾಟುವ ಸಾಧ್ಯತೆ ಇದೆ. ಸಿಬ್ಬಂದಿ ಕೊರತೆ ನಡುವೆಯೂ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಣ್ಣಪುಟ್ಟ ವ್ಯಾಜ್ಯಗಳನ್ನು ಗ್ರಾಮ ಮಟ್ಟದಲ್ಲೇ ಬಗೆಹರಿಸಿದರೆ ಪೊಲೀಸ್ ಠಾಣೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ನಿಯಮ ಪಾಲನೆಯಾಗುತ್ತಿಲ್ಲ. ಅತಿವೇಗ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. 50 ವರ್ಷಗಳಿಂದ ಬೇಲೂರಿನಲ್ಲಿ ಯಾವುದೇ ಗಲಭೆ ನಡೆದಿಲ್ಲ. ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದವರು ಒಂದಾಗಿ ಬಹುಕುತ್ತಿದ್ದು, ಇದೇ ರೀತಿ ಎಲ್ಲರೂ ಸಹಕಾರ ನಿಡಬೇಕು ಎಂದರು.
ಕರವೇ ಪ್ರಧಾನ ಕಾರ್ಯದರ್ಶಿ ಖಾದರ್ ಮಾತನಾಡಿ, ಸಮಾಜದಲ್ಲಿ ಸಣ್ಣ ಸಮಸ್ಯೆಗಳನ್ನು ಆರಂಭದಲ್ಲೇ ಪರಿಹರಿಸಿದರೆ ದೊಡ್ಡ ಘಟನೆಗಳನ್ನು ತಪ್ಪಿಸಬಹುದು. ಯುವಕರಲ್ಲಿ ಬೈಕ್ ರೈಡಿಂಗ್ ಹೆಚ್ಚಾಗಿದ್ದು, ಜೀವನ ಹಾಳಾಗದಂತೆ ಜಾಗೃತಿ ಮೂಡಿಸಬೇಕಿದೆ. ಬೇಲೂರು ಸೌಹಾರ್ದತೆಗೆ ಹೆಸರಾದ ಊರಾಗಿದೆ. ಸಣ್ಣಪುಟ್ಟ ಘಟನೆಗಳನ್ನು ಸ್ಥಳೀಯ ಮಟ್ಟದಲ್ಲೇ ಮಾತುಕತೆ ಮೂಲಕ ಬಗೆಹರಿಸುವ ಪರಂಪರೆ ಇಲ್ಲಿದ್ದು, ಚನ್ನಕೇಶವಸ್ವಾಮಿ ದೇವಸ್ಥಾನ ಇರುವುದರಿಂದ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.
ಉದ್ಯಮಿ ಸಂತೋಷ್ ಮಾತನಾಡಿ, ಯಾರೇ ತಪ್ಪು ಮಾಡಿದರೂ ಅದನ್ನು ತಿದ್ದುವುದು ಸಮಾಜದ ಕರ್ತವ್ಯ. ಬೇಲೂರಿನ ಬಗ್ಗೆ ಯಾವುದೇ ಕೆಟ್ಟ ಸಂದೇಶ ಹೊರಗೆ ಹೋಗದಂತೆ ಎಲ್ಲರೂ ಒಗ್ಗಟ್ಟಿನಿಂದ ನಡೆದುಕೊಳ್ಳಬೇಕು. ಯುವಕರಲ್ಲಿ ಹೆಚ್ಚುತ್ತಿರುವ ಬೈಕ್ ವ್ಹೀಲಿಂಗ್, ರೇಸ್‌ಗಳಿಂದ ಅನಾಹುತ ಸಂಭವಿಸುತ್ತಿದ್ದು, ಮಕ್ಕಳನ್ನು ಸರಿದಾರಿಗೆ ತರುವುದು ಎಲ್ಲರ ಜವಾಬ್ದಾರಿ ಎಂದರು.
ವೀರಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್, ಕರವೇ ಅಧ್ಯಕ್ಷ ಚಂದ್ರಶೇಖರ್ ಮುಖಂಡರಾದ ಇಫ್ಫಿ, ವೆಂಕಟೇಶ್ ಸೇರಿದಂತೆ ಇತರರಿದ್ದರು.
ಚಿತ್ರ:21(ಬಿಎಲ್‌ಆರ್)2-