ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ವಾಲ್ಮೀಕಿ ಹಗರಣದ ಆರೋಪಿ ಬಿ.ನಾಗೇಂದ್ರಗೆ ಸಚಿವ ಸ್ಥಾನ ನೀಡಿರುವುದು ಸರಿಯಲ್ಲ. ಕೂಡಲೇ ರಾಜೀನಾಮೆ ಪಡೆಯಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿ, 13ಕ್ಕೆ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ನಾಗೇಂದ್ರ ಅವರ ರಾಜೀನಾಮೆಗೆ ಹೋರಾಟ ನಡೆಸುತ್ತೇವೆ. ರಾಜೀನಾಮೆ ಕೊಡದಿದ್ದರೆ ಸದನ ನಡೆಸಲು ಬಿಡುವುದಿಲ್ಲ ಎಂದರು.
ಇವತ್ತಿಗೂ ಜಾಮೀನಿನ ಮೇಲೆ ಇದ್ದಾರೆ. ಚಾರ್ಜ್‌ಶೀಟ್ ಸಹ ಸಲ್ಲಿಕೆಯಾಗಿದೆ. ಭ್ರಷ್ಟಾಚಾರ ಆರೋಪದಲ್ಲಿ ಇದ್ದರೂ ಕಾಂಗ್ರೆಸ್ ಸಚಿವ ಸ್ಥಾನ ನೀಡಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಸಚಿವ ಸ್ಥಾನಗಳನ್ನು ಹರಾಜಿಗೆ ಇಟ್ಟಿತ್ತು. ಶಕ್ತಿ ಇದ್ದವರು ಪಡೆದಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ವಿಡಿಯೋಗಳು ಓಡಾಡುತ್ತಿವೆ. ಕಾಂಗ್ರೆಸ್ ನಾಯಕರೇ ಭ್ರಷ್ಟರನ್ನು ಉತ್ಪತ್ತಿ ಮಾಡುತ್ತಿರುವುದು ಆಡಿಯೋದಲ್ಲಿ ಸಾಬೀತಾಗಿದೆ ಎಂದು ಛಲವಾದಿ ದೂರಿದ್ದಾರೆ. ಸಚಿವರಿಗೆ ಕನ್ನಡದಲ್ಲಿ ಸ್ವಚ್ಛವಾಗಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗಿಲ್ಲ. ಇಂಥವರನ್ನೆಲ್ಲ ಸಚಿವರನ್ನಾಗಿ ಮಾಡಿದ್ದಾರೆ. ಭಾಷೆ ಬರದಿದ್ದರೆ ಪರವಾಗಿಲ್ಲ. ಲೂಟಿ ಮಾಡಲು ಬಂದರೆ ಸಾಕೆಂಬ ಉದ್ದೇಶವೇ ಎಂದು ವಿಪಕ್ಷ ನಾಯಕ ಪ್ರಶ್ನಿಸಿದರು.