ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿಚಾರ
- ಮೈಸೂರು ದಸರಾದಲ್ಲಿ ಕಂಬಳಕ್ಕೆ ಪರ-ವಿರೋಧ ಕೂಗು ಜೋರು
- ಕಂಬಳ ಕೂಡ ನಮ್ಮ ಸಂಸ್ಕೃತಿಯ ಭಾಗ ಎಂದ ಮೈಸೂರು ಉಸ್ತುವಾರಿ ಸಚಿವರು
- ಚಾಮುಂಡಿ ಬೆಟ್ಟದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2026ರ ಉದ್ಘಾಟನೆ ದಿನಾಂಕ ಅಧಿಕೃತವಾಗಿ ಹೊರಬಿದ್ದಿದ್ದೇ ಆದರೂ ಕರಾವಳಿಯ ಕಂಬಳ ನಡೆಸುವ ಬಗ್ಗೆ ಪರ-ವಿರೋಧ ಚರ್ಚೆಗಳು ಸದ್ಯ ರಾಜಕೀಯ ಅಂಗಳ ಮತ್ತು ಜಾಲತಾಣಗಳಲ್ಲಿ ಬಲು ಜೋರಾಗಿವೆ. ಕಂಬಳ ಸೇರಿಸುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ನಾಯಕರು ಅಕ್ಷರಶಃ ವಿರೋಧ ವ್ಯಕ್ತಪಡಿಸುತ್ತಿದ್ದು, ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಸಚಿವರು, ಜುಲೈ 17ರಿಂದ ಆಷಾಢ ಶುಕ್ರವಾರ ಆರಂಭವಾಗಲಿದೆ. ವಿವಿಐಪಿಗಳಿಗೆ ಬೆಳಗ್ಗೆ 5.30ರಿಂದ 9.30ರವರೆಗೆ ಮಾತ್ರ ಅವಕಾಶ ನೀಡಿದ್ದೇವೆ. ಶಿಷ್ಟಾಚಾರವಿರುವ ಗಣ್ಯರ ವಾಹನಕ್ಕೆ ಮಾತ್ರ ಬೆಟ್ಟಕ್ಕೆ ಪ್ರವೇಶವಿದೆ. ಶಿಫಾರಸ್ಸು ಪತ್ರ ಹಿಡಿದು ಬಂದ ವಾಹನಗಳಿಗೆ ಅನುಮತಿ ಇಲ್ಲ. 2,000 ರೂ. ಟಿಕೆಟ್ ಮಾತ್ರ ಲಭ್ಯವಿದೆ. 300 ರೂ. ಟಿಕೆಟ್ನಿಂದ ಗೊಂದಲಗಳು ಸೃಷ್ಟಿಯಾಗಿತ್ತು, ಹೀಗಾಗಿ ಅದನ್ನು ರದ್ದುಗೊಳಿಸಿದ್ದೇವೆ ಎಂದರು.
ದಸರಾದಲ್ಲಿ ಕಂಬಳ ವಿಚಾರ
ಇನ್ನು, ನಾಡಹಬ್ಬ ದಸರಾದಲ್ಲಿ ಕಂಬಳ ನಡೆಸುವ ಕುರಿತು ಪ್ರತಿಕ್ರಿಯಿಸಿದ ಅವರು, ಕಂಬಳ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಇನ್ನೂ ಬಂದಿಲ್ಲ. ಪರಿಸರಕ್ಕೆ ಕೊಡಲಿ ಹಾಕಿ ಕಂಬಳ ಮಾಡುತ್ತಿಲ್ಲ. ಈಗಾಗಲೇ ಬೇಡ ಎಂಬ ಕೂಗು ಎದ್ದಿದ್ದೆ. ಎಲ್ಲದರ ಸಾಧಕ ಬಾಧಕಗಳನ್ನು ಸಿಎಂ ಪರಿಶೀಲಿಸುತ್ತಾರೆ. ಅದಾದ ಬಳಿಕವೇ ಅಂತಿಮ ತೀರ್ಮಾನ. ಕಂಬಳ ಕೂಡ ನಮ್ಮ ಸಂಸ್ಕೃತಿಯ ಒಂದು ಭಾಗ. ಅದನ್ನು ಮೈಸೂರು ಭಾಗಕ್ಕೂ ಪ್ರಚಾರ ಮಾಡುವ ದೃಷ್ಟಿಯಿಂದ ಕಂಬಳ ನಡೆಸಲು ಚಿಂತನೆ ಮಾಡಿರುವುದು ಎಂದರು.
ಸಂಪುಟ ವಿಸ್ತರಣೆ ವಿಚಾರ
ಸೂಟ್ ಕೇಸ್ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ. ಅದನ್ನು ಕೊಟ್ಟರೆ ಮಂತ್ರಿ ಸ್ಥಾನ ಕೊಡುತ್ತಾರೆ ಎಂಬ ಮಾತುಗಳು ಸುಳ್ಳು. ಈ ಬಗ್ಗೆ ಆರೋಪ ಮಾಡುವ ವಿಪಕ್ಷದಲ್ಲೇ ಅಂತಹ ಸಂಸ್ಕೃತಿ ಇದೆ. ಸಂಪುಟ ವಿಸ್ತರಣೆ ವಿಚಾರ ಸಿಎಂ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನೇ ಕೇಳಿ. ನನಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.