ಸಚಿವ ಸತೀಶ್​ ಜಾರಕಿಹೊಳಿ, ಕೇಂದ್ರ ಸಚಿವ ಎಚ್​ಡಿಕೆ 
ರಾಜ್ಯ

ನೈಸ್ ಟೋಲ್ ನಿಲ್ಲಿಸುವ ಹಕ್ಕು ನಮಗಿಲ್ಲ: ಎಚ್​ಡಿಕೆ ಆರೋಪಕ್ಕೆ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷ ತಿರುಗೇಟು

ಪ್ರಮುಖ ಮುಖ್ಯಾಂಶಗಳು

  • ನೈಸ್​ ಪರವಾಗಿ ಸರ್ಕಾರ ಬೆನ್ನಿಗೆ ನಿಂತಿದೆ ಎಂಬ ಎಚ್​ಡಿಕೆ ಆರೋಪ
  • ಇನ್ನೂ ಹತ್ತು ವರ್ಷ ಏನು ಮಾಡಲು ಸಾಧ್ಯವಿಲ್ಲ
  • ವಿಧಾನಸೌಧದಲ್ಲಿ ನೈಸ್​ ಟೋಲ್​ ವಿವಾದಕ್ಕೆ ಉತ್ತರಿಸಿದ ಸಚಿವ ಸತೀಶ್​ ಜಾರಕಿಹೊಳಿ
ಬೆಂಗಳೂರು: ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರು ಯಾರೊಬ್ಬರು ನೈಸ್​ ಟೋಲ್​ ಕಟ್ಟಬೇಡಿ ಎಂದು ಕರೆ ಕೊಟ್ಟ ದಿನದಿಂದಲೂ ಸೃಷ್ಟಿಯಾಗಿರುವ ವಾಹನ ಸವಾರರು ಮತ್ತು ಟೋಲ್​ ಸಿಬ್ಬಂದಿಯ ಜಟಾಪಟಿ ಮತ್ತು ಗೊಂದಲಗಳು ಸದ್ಯ ರಾಜ್ಯ ಸರ್ಕಾರದ ಬಾಗಿಲು ಬಡಿದಿದೆ. ನೈಸ್​ ಪರವಾಗಿ ಸರ್ಕಾರ ಬೆನ್ನಿಗೆ ನಿಂತಿದೆ ಎಂಬ ಎಚ್​ಡಿಕೆ ಅವರ ಸರಣಿ ಆರೋಪಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷ ತಿರುಗೇಟು ನೀಡಿದ್ದಾರೆ.
ನೈಸ್​ ಅವರ ಪರವಾಗಿ ನಾವಿಲ್ಲ. ಮೂವತ್ತು ವರ್ಷಕ್ಕೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದೆ. ಇನ್ನೂ ಹತ್ತು ವರ್ಷ ಏನು ಮಾಡಲು ಸಾಧ್ಯವಿಲ್ಲ. ಈ ವಿಚಾರ ಕೋರ್ಟ್​ ಮೆಟ್ಟಿಲು ಕೂಡ ಏರಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾವು ಕಾನೂನು ತಜ್ಞರ ಜತೆಗೂ ಚರ್ಚೆ ಮಾಡುತ್ತಿದ್ದೇವೆ. ಇಲ್ಲಿ ಸರ್ಕಾರ ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ಪರ-ವಿರೋಧದ ಚರ್ಚೆಗಳು, ಗೊಂದಲಗಳು ಇವೆ ಎಂದರು.
ನೈಸ್​ ಟೋಲ್​ಗೆ ಸಂಬಂಧಪಟ್ಟಂತೆ ಏಕ್ಸಪರ್ಟ್​ಗಳ ಜತೆಗೆ ಮಾತನಾಡುತ್ತೇವೆ. ಹೈಕೋರ್ಟ್ ಮೊನ್ನೆಯಷ್ಟೇ ಆದೇಶ ಹೊರಡಿಸಿದೆ. ಯಾವ ಸರ್ಕಾರದಲ್ಲಿ ಈ ಯೋಜನೆ ಆಗಿದ್ದು? ಅನ್ನೋದನ್ನು ನೀವು ವಿಚಾರಿಸಿ ನೋಡಬೇಕು. ಈ ಹಿಂದೆ ಕ್ಯಾಬಿನೆಟ್ ಬದಲಾವಣೆ ಆಗಿದ್ದು ಇದೆ. ಸದ್ಯ ಟೋಲ್ ನಿಲ್ಲಿಸುವ ಹಕ್ಕು ನಮಗಿಲ್ಲ. ನೈಸ್ ಕಂಪನಿ ಮುಖ್ಯಸ್ಥರು ನಮ್ಮ ಕಡೆ ಬಂದಿಲ್ಲ. ಅವರೇನಿದ್ದರು, ನ್ಯಾಯಾಲಯದಲ್ಲಿ ನೋಡಬೇಕು ಎಂದು ಹೇಳಿ ಪರೋಕ್ಷವಾಗಿ ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದರು.

ಏನಿದು ನೈಸ್​ ವಿವಾದ?

ನೈಸ್ ರಸ್ತೆ ಟೋಲ್ ವಿವಾದ ರಾಜಧಾನಿಯ 'ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್' (BMICP) ಯೋಜನೆಯಡಿ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ಕಂಪನಿಯು ಸಂಗ್ರಹಿಸುತ್ತಿರುವ ಟೋಲ್ ಮತ್ತು ಮೂಲ ಒಪ್ಪಂದದ ಉಲ್ಲಂಘನೆಗೆ ಸಂಬಂಧಿಸಿದ ರಾಜಕೀಯ ಹಾಗೂ ಕಾನೂನು ಹೋರಾಟ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.
ಕರ್ನಾಟಕ ಹೈಕೋರ್ಟ್ ನೈಸ್ ಯೋಜನೆಗೆ ಸಂಬಂಧಿಸಿದಂತೆ ಪರಿಶೀಲಿಸಿ, ಈ ಯೋಜನೆಯು ರಾಜ್ಯದ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದರಂತೆ ಕಾಣುತ್ತಿದೆ ಮತ್ತು ಇದರ ಆಡಳಿತ ಹಾಗೂ ಖಾತೆಗಳ ಬಗ್ಗೆ ಸ್ವತಂತ್ರ ತನಿಖೆ ಅಥವಾ ಫೊರೆನ್ಸಿಕ್ ಆಡಿಟ್ ಅಗತ್ಯವಿದೆ ಎಂದು ಇತ್ತೀಚೆಗಷ್ಟೇ ಅಭಿಪ್ರಾಯಿಸಿದೆ.
ಹೈಕೋರ್ಟ್‌ನ ಈ ಹೇಳಿಕೆಯ ಬೆನ್ನಲ್ಲೇ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನೈಸ್ ರಸ್ತೆಯಲ್ಲಿ ಅಕ್ರಮವಾಗಿ ಟೋಲ್ ವಸೂಲಿ ಮಾಡಲಾಗುತ್ತಿದೆ. ನಿಯಮಗಳನ್ನು ಗಾಳಿಗೆ ತೂರಿ ದರ ಹೆಚ್ಚಿಸಲಾಗಿದೆ. ಸಾರ್ವಜನಿಕರು ನೈಸ್ ರಸ್ತೆಯಲ್ಲಿ ಪ್ರಯಾಣ ಮಾಡುವುದಾದರೆ, ಯಾವುದೇ ಕಾರಣಕ್ಕೂ ಟೋಲ್ ಕಟ್ಟಬೇಡಿ ಎಂದು ಕರೆ ನೀಡಿದರು. ಅಲ್ಲದೆ, ಸರ್ಕಾರವೇ ಈ ಯೋಜನೆಯನ್ನು ತನ್ನ ಸುಪರ್ದಿಗೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.