ಬೆಂಗಳೂರು: ಜಪಾನ್ನಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿರುವ ಏಷ್ಯನ್ ಪ್ಯಾರಾ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಖ್ಯಾತ ಅಂತಾರಾಷ್ಟ್ರೀಯ ಪ್ಯಾರಾ ಗೇಮ್ಸ್ ಆಟಗಾರ್ತಿ, ಕಾರ್ಮಿಕ ಇಲಾಖೆ ಅಧಿಕಾರಿ ಕುಮಾರಿ ರಾಧಾ ವೆಂಕಟೇಶ್ ಅವರಿಗೆ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಸಂತೋಷ್ ಲಾಡ್ ಶುಭ ಹಾರೈಸಿದ್ದಾರೆ.
ಸಚಿವರ ನಿವಾಸಕ್ಕೆ ಆಗಮಿಸಿದ ರಾಧಾ ವೆಂಕಟೇಶ್ ಅವರನ್ನು ಗೌರವಿಸಿ ಮಾತನಾಡಿದ ಸಚಿವರು, ಪ್ಯಾರಾ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ರಾಧಾ ವೆಂಕಟೇಶ್ ಅವರಿಗೆ ಅಭಿನಂದನೆಗಳು. ಇವರು ನಮ್ಮ ಇಲಾಖೆಯ ಅಧಿಕಾರಿ ಎಂಬುದು ಮತ್ತೊಂದು ಖುಷಿಯ ವಿಷಯ. ಬಡತನ ಮತ್ತು ಅಂಗವೈಕಲ್ಯವನ್ನು ಮೆಟ್ಟಿನಿಂತು, ಕ್ರೀಡಾ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡುತ್ತಿರುವ ರಾಧಾ ಅವರ ಜೀವನ ಇತರರಿಗೂ ಮಾದರಿಯಾಗಲಿ. ಇಲಾಖೆಯಿಂದ ಅಗತ್ಯ ನೆರವು ಮತ್ತು ಸಹಾಯ ಮಾಡಲಾಗುವುದು ಎಂದು ತಿಳಿಸಿದರು.
"ರಾಧಾ ವೆಂಕಟೇಶ್ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಸರ್ಕಾರದ ಪರವಾಗಿ, ಜನತೆಯ ಪರವಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಮೂಲಕ ನಮ್ಮ ದೇಶಕ್ಕೆ, ರಾಜ್ಯಕ್ಕೆ ಬಂಗಾರದ ಪದಕದ ಜತೆ ಮರಳಿ" ಎಂದು ಪ್ರಶಂಸಿಸಿದ್ದಾರೆ.
ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೊಮ್ಮಸಮುದ್ರ ಗ್ರಾಮದ ರಾಧಾ ಅವರು, ದೃಷ್ಟಿ ದೋಷವುಳ್ಳ (T12 ವಿಭಾಗ) ಪ್ರಮುಖ ಪ್ಯಾರಾ-ಅಥ್ಲೀಟ್ ಆಗಿದ್ದು, ಓಟದ ಸ್ಪರ್ಧೆಗಳಲ್ಲಿ (ಮುಖ್ಯವಾಗಿ 400 ಮೀಟರ್ ಮತ್ತು 1500 ಮೀಟರ್) ದೇಶವನ್ನು ಪ್ರತಿನಿಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿದ್ದಾರೆ.
ಏಷ್ಯನ್ ಪ್ಯಾರಾ ಗೇಮ್ಸ್ 2018 (ಇಂಡೋನೇಷ್ಯಾ): ಮಹಿಳೆಯರ 1500 ಮೀಟರ್ ಓಟದಲ್ಲಿ ಬೆಳ್ಳಿ ಪದಕ, ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ 2025
(ನವದೆಹಲಿ): T12 1500 ಮೀಟರ್ ಓಟವನ್ನು ಕೇವಲ 5 ನಿಮಿಷ 15.57 ಸೆಕೆಂಡುಗಳಲ್ಲಿ ಮುಗಿಸಿ ಚಿನ್ನದ ಪದಕ
7ನೇ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ 2025: ತಮ್ಮ ಗೈಡ್ ರನ್ನರ್ ಗೋವಿಂದ್ ಅವರ ಸಹಾಯದೊಂದಿಗೆ ಬೆಳ್ಳಿ ಪದಕ
8ನೇ ಇಂಡಿಯನ್ ಓಪನ್ ಇಂಟರ್ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ಸ್ 2026 (ಬೆಂಗಳೂರು): ಇತ್ತೀಚೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ 1500 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ದೃಷ್ಟಿ ದೌರ್ಬಲ್ಯ ಹಾಗೂ ಬಡತನದ ಸವಾಲುಗಳನ್ನು ಮೆಟ್ಟಿ ನಿಂತು ಏಷ್ಯಾ ಮತ್ತು ಜಾಗತಿಕ ಮಟ್ಟದ ಶ್ರೇಯಾಂಕಗಳಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ರಾಧಾ ವೆಂಕಟೇಶ್ ಅವರು ನೂರಾರು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ.