ಬೆಂಗಳೂರು: ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಭಾರಿ ಕೋಲಾಹಲ ಎಬ್ಬಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದಿರುವ ವಿಚಾರಗಳು ತೀವ್ರ ಗೊಂದಲಗಳನ್ನು ಸೃಷ್ಟಿಸಿದೆ. ಆರೋಪ- ಪ್ರತ್ಯಾರೋಪಗಳಿಂದ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಯೇ ಹರಿದುಬಂದಿರುವ ಬೆನ್ನಲ್ಲೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಇದರಲ್ಲಿ ಕ್ರಿಮಿನಲ್ ಪಿತೂರಿ ಇರುವುದು ಸ್ಪಷ್ಟ. ಸತ್ಯ ಹೊರಬರಲಿ ಅಂತಾನೆ ಕಂಪ್ಲೇಂಟ್ ಕೊಟ್ಟಿದ್ದಾರೆ. ನಾವು ತನಿಖೆಯನ್ನು ಕೈಗೊಂಡಿದ್ದೇವೆ. ನಮ್ಮ ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ಇಂದಲ್ಲ, ನಾಳೆ ಸತ್ಯ ಆಚೆ ಬರಲಿದೆ. ಇದರಲ್ಲಿ ಗೊಂದಲ, ಅನುಮಾನ ಪಡುವಂತದ್ದು ಏನೂ ಇಲ್ಲ. ಸ್ವಲ್ಪ ಸಮಯ ಬೇಕು ಎಂದರು.
ಯಾರ್ಯಾರು ಮಾಡಿದ್ದಾರೆ, ಅವರ ಹಿಂದೆ ಯಾರಿದ್ದಾರೆ, ಎಲ್ಲಾಗಿದೆ, ಸ್ಟಿಂಗ್ ಯಾರು ಮಾಡಿದ್ದು, ಯಾಕೆ ಮಾಡಿದ್ದು, ಇಷ್ಟು ವರ್ಷ ಆದಮೇಲೆ ಯಾರ ಕೈಗೆ ಸಿಕ್ತು, ಇದ್ದಕ್ಕಿದ್ದಂತೆ ಯಾಕೆ ಅಪ್ಲೋಡ್ ಆಯ್ತು? ಈ ಎಲ್ಲವೂ ಶೀಘ್ರದಲ್ಲೇ ಬಯಲಾಗಲಿದೆ. ಅದರ ಮೂಲದಿಂದ ಹಿಡಿದು ಇಲ್ಲಿ ತನಕ ಏನೇನಾಗಿದೆ ಎಲ್ಲವನ್ನು ಬಟಾಬಯಲು ಮಾಡುತ್ತೇವೆ ಎಂದು ಹೇಳಿದರು.
ಹಿಂದೆ ನಿಂತು ಸ್ಟಿಂಗ್ ಮಾಡಿಸಿದ್ದು ಯಾರು ಎಂಬ ತನಿಖೆಗೆ ಸಿದ್ದರಾಮಯ್ಯ ಒತ್ತಾಯಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಒಂದೇ ದಿನಕ್ಕೆ ಗೊತ್ತಾಗಲ್ಲ. 2015, 2023 ,2025 ಅಪ್ಲೋಡ್ ಅಂತಾರೆ. ಎಲ್ಲಾ ತನಿಖೆ ಮಾಡಬೇಕಲ್ಲ? ಗಡಿಬಿಡಿ ಮಾಡಿ ಪ್ರಚಾರಕ್ಕೋಸ್ಕರ ಮಾತಾಡಬೇಕು ಅನ್ನೋದು ತಪ್ಪಾಗುತ್ತೆ. ಸರ್ಕಾರದ ಘನತೆ, ಪಕ್ಷದ ಘನತೆ ಅದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯನವರ ಗೌರವದ ಪ್ರಶ್ನೆ. ಇದರಲ್ಲಿ ಯಾರೇ ಇರಲಿ ನಾವು ತನಿಖೆಯನ್ನು ಪಾರದರ್ಶಕವಾಗಿ ಪ್ರಾಮಾಣಿಕವಾಗಿ ಮಾಡ್ತೀವಿ ಎಂದರು.
ನಿಷ್ಪಕ್ಷಪಾತವಾದ ತನಿಖೆ ಆಗಲಿದೆ. ಯಾವುದೇ ರಾಜಕೀಯ ಒತ್ತಡ ಇಲ್ಲದೆ ತನಿಖೆ ನಡೆಯಲಿದೆ. ಯಾರ್ಯಾರ ಹೆಸರು ಉಲ್ಲೇಖಿಸಿದ್ದಾರೆ ಅವರನ್ನೆಲ್ಲ ತನಿಖೆಗೆ ಒಳಪಡಿಸಿದ್ದೇವೆ. ಸ್ಟೇಟ್ಮೆಂಟ್ ರೆಕಾರ್ಡ್ ಮಾಡಿದ್ದೇವೆ, ಇಂಟರಾಗೇಶನ್ ರೆಕಾರ್ಡ್ ಆಗಿದೆ ಮತ್ತು ಸಮಯ ಬಂದಾಗ ಎಲ್ಲವನ್ನೂ ನಿಮ್ಮ ಮುಂದೆ ಇಡ್ತೀವಿ. ಇದರಲ್ಲಿ ತಪ್ಪಿಸಿಕೊಳ್ಳುವುದು ಇಲ್ಲ, ಚಾರ್ಜ್ ಶೀಟ್ ಆಗಲೇಬೇಕು. ಕೋರ್ಟ್‌ಗೆ ಸಲ್ಲಿಸಲೇಬೇಕು, ಆರ್ಟಿನಲ್ಲೂ ಬರಲೇಬೇಕು ಎಂದು ಹೇಳಿದ್ದಾರೆ.