ಬೆಂಗಳೂರು: ತಮ್ಮ ವಿದ್ಯಾರ್ಹತೆ ಕುರಿತು ಟೀಕೆ ಮಾಡಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಹೆಚ್ಚು ವಿದ್ಯಾರ್ಹತೆ ಹೊಂದಿದ್ದೇನೆ ಎಂದರು.
ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವ ಖರ್ಗೆ, ಪ್ರಧಾನಿ ಮೋದಿಯವರ ಡಿಗ್ರಿ ಏನು ಎಂಬುದು ಯಾರಿಗೂ ಗೊತ್ತಿಲ್ಲ, ಆರ್ಟಿಐನಲ್ಲೂ ಅದಕ್ಕೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಆದರೆ, ತಾವು ಗ್ರಾಫಿಕ್ ಡಿಸೈನರ್ ಆಗಿದ್ದು, ಮೋದಿಯವರಿಗಿಂತ ಚೆನ್ನಾಗಿ ಇಂಗ್ಲಿಷ್, ಹಿಂದಿ ಮಾತನಾಡುವುದಲ್ಲದೆ ಸಂಸ್ಕೃತವನ್ನೂ ಓದಬಲ್ಲೆ ಎಂದು ತಮ್ಮ ವಿದ್ಯಾರ್ಹತೆ ಸಮರ್ಥಿಸಿಕೊಂಡಿದ್ದಾರೆ.
ತಾವು ಕಾನ್ವೆಂಟ್ನಲ್ಲಿ ಓದಿಲ್ಲ, ಬದಲಿಗೆ ಆದಿಮಠ ಶಾಲೆಯಲ್ಲಿ ಓದಿದವನು ಎಂದು ಸ್ಪಷ್ಟಪಡಿಸಿದ ಸಚಿವರು, ಛಲವಾದಿ ನಾರಾಯಣಸ್ವಾಮಿ ಅವರೊಂದಿಗೆ ಯಾವುದೇ ವಿಷಯದ ಮೇಲೆ, ಯಾವುದೇ ಭಾಷೆಯಲ್ಲಿ ಎಷ್ಟು ಗಂಟೆಯಾದರೂ ಮುಕ್ತ ಚರ್ಚೆಗೆ ಸಿದ್ಧವಿರುವುದಾಗಿ ಸವಾಲು ಹಾಕಿದರು.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಖರ್ಗೆ, ಜೆಡಿಎಸ್ ಎಷ್ಟು ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂದು ಪ್ರಶ್ನಿಸುತ್ತಾ, ವಿಧಾನಸಭೆಯಲ್ಲಿ 75 ಸ್ಥಾನಗಳನ್ನು ದಾಟಲು ಸಾಧ್ಯವಾಗಿಲ್ಲ. ಮ್ಯಾಚ್ ಫಿಕ್ಸಿಂಗ್ ಮಾಡಿ, ಹಣ ನೀಡಿ, ಕಣ್ಣೀರು ಸುರಿಸಿ ಹಾಗೂ ವಚನಭ್ರಷ್ಟರಾಗಿ ಅವರು ಅಧಿಕಾರಕ್ಕೆ ಬಂದು ಹೋಗುತ್ತಾರೆ. ಕುಮಾರಸ್ವಾಮಿ ಗಂಭೀರ ರಾಜಕಾರಣಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರದಲ್ಲಿದ್ದಾಗ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಇರುತ್ತಾರೆ, ಅಧಿಕಾರವಿಲ್ಲದಿದ್ದಾಗ ಹಳ್ಳಿಯ ನೆನಪು ಬರುತ್ತದೆ ಎಂದು ಲೇವಡಿ ಮಾಡಿದ ಅವರು, ಅವಿವೇಕಿಗಳು ನಗರದಲ್ಲಿದ್ದರೂ, ಹಳ್ಳಿಯಲ್ಲಿದ್ದರೂ ಅಥವಾ ತಾಜ್ ವೆಸ್ಟ್ ಎಂಡ್ನಲ್ಲಿ ಕುಳಿತರೂ ಅವಿವೇಕಿಗಳೇ ಆಗಿರುತ್ತಾರೆ. ಮುಖ್ಯಮಂತ್ರಿಯಾಗಿದ್ದವರು ತಮ್ಮ ಆ ಮೂರ್ಖತನವನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಎಂದರು. ತಮ್ಮ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹಾಗೂ ವಿರೋಧಿಗಳು ಬಿಲ್ ಬೋರ್ಡ್ ಅಭಿಯಾನ ನಡೆಸುತ್ತಿರುವ ಕುರಿತು ಉತ್ತರಿಸಿ, ನನ್ನ ಎಲ್ಲಾ ಮಾತುಗಳೂ ವೈರಲ್ ಆಗುತ್ತವೆ, ಬಿಲ್ ಬೋರ್ಡ್ ಹಾಕಿದರೆ ನಾನೇನು ಮಾಡಲು ಸಾಧ್ಯ ಎಂದು ಮರುಪ್ರಶ್ನಿಸಿದರು.
ಈಗ ಯಾಕೆ ಬಿಜೆಪಿಯವರು ಸಾಹುಕಾರ್ ಬಗ್ಗೆ ಮಾತಾಡುತ್ತಲೇ ಇಲ್ಲ? ಕುಮಾರಸ್ವಾಮಿಯವರು ಯಾಕೆ ಸಾಹುಕಾರ್ ಬಗ್ಗೆ ಮಾತಾಡುತ್ತಿಲ್ಲ? ಎಂದು ಪ್ರಶ್ನಿಸಿದ ಖರ್ಗೆ, ಕುಮಾರಸ್ವಾಮಿ ಮೂರು ತಿಂಗಳ ಹಿಂದೆಯೇ ತಮ್ಮ ವಿಕೆಟ್ ಪತನವಾಗಬೇಕಿತ್ತು ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಒಬ್ಬ ಐಎಎಸ್ ಅಧಿಕಾರಿ ಹಾಗೂ ಮಧ್ಯವರ್ತಿಗೆ ನನ್ನ ಹೆಸರು ಹೇಳಿ ಐಟಿ-ಇಡಿಗೆ ದೂರು ಕೊಡಿ ಎಂದು ಒತ್ತಡ ಹೇರಿದ್ದು ಯಾರು? ಏನೇ ಮಾಡಿದರೂ ಸತ್ಯ ಹೊರಬರಲಿದೆ ಎಂದು ಸವಾಲು ಎಸೆದರು.
ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರು ಬರೋದ್ರಿಂದ ಏನಾಗಬೇಕು? ಬಂದ ಪುಟ್ಟ, ಹೋದ ಪುಟ್ಟ ಅಷ್ಟೇ. ಹಿಂದೆ ತುಮಕೂರಿಗೆ ಮೋದಿ ಮತ್ತು ಅಮಿತ್ ಷಾ ಬಂದಾಗ, ಆಗಿನ ಮುಖ್ಯಮಂತ್ರಿಗಳು ರಾಜ್ಯಕ್ಕೆ ಬರಬೇಕಿದ್ದ 18,000 ಕೋಟಿ ರೂ ಪರಿಹಾರದ ಹಣದ ಬಗ್ಗೆ ಮನವಿ ಮಾಡಿದರೂ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿದರು.