Minister Muniyappa should become CM
ಮಧುಗಿರಿ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಅವರು ಮಧುಗಿರಿಯ ಜಡೇಗೊಂಡನಹಳ್ಳಿಗೆ ಶುಕ್ರವಾರ ಆಗಮಿಸಿದ್ದ ಸಂದರ್ಭದಲಿ ಸಚಿವರನ್ನು ಸ್ವಾಗತಿಸಿದ ಆದಿಜಾಂಭವ ಸಮುದಾಯದ ಮುಖಂಡರು ಮುಂದಿನ ದಲಿತ ಮುಖ್ಯಮಂತ್ರಿ ಕೆ.ಎಚ್.ಮುನಿಯಪ್ಪಗೆ ಎಂದು ಜೈಕಾರ ಕೂಗುತ್ತಾ ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪ್ರಗತಿಪರ ಚಿಂತಕ ಡಾ.ಕಾಳೇನಹಳ್ಳಿ ನರಸಿಂಹಯ್ಯ ಮಾತನಾಡಿ, ನಮ್ಮ ಜನಾಂಗದ ಹಿರಿಯ ರಾಜಕಾರಣಿ, ಕೇಂದ್ರ ಸರ್ಕಾರದಲ್ಲಿ ಗುರುತಿಸಿಕೊಂಡು ಹೈಕಮಾಂಡ್ ಜತೆಗೆ ಉತ್ತಮ ಒಡನಾಟ ಹೊಂದಿರುವ ಕೆ.ಎಚ್.ಮುನಿಯಪ್ಪ ಅವರಿಗೆ ಮುಖ್ಯಮಂತ್ರಿಯಾಗಲು ಎಲ್ಲ ಅರ್ಹತೆಗಳಿವೆ. ಕಾಂಗ್ರೆಸ್ ಹೈಕಮಾಂಡ್ ಇವರ ಸೇವೆ ಗುರುತಿಸಿ ಸಿಎಂ ಮಾಡಲಿ ಎಂದು ಒತ್ತಾಯಿಸಿದರು.
ಮಧುಗಿರಿಯ ಶಕ್ತಿದೇವತೆ ಶ್ರೀ ದಂಡಿನ ಮಾರಮ್ಮನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಂತರ ಪ್ರವಾಸಿ ಮಂದಿರಕ್ಕೆ ತೆರಳಿದ ಕೆ.ಎಚ್.ಮುನಿಯಪ್ಪ ಸಮುದಾಯದ ಮುಖಂಡರ ಜತೆ ಕೆಲ ಕಾಲ ಚರ್ಚಿಸಿ, ಈಗಾಗಲೇ ರಾಜ್ಯಾದ್ಯಂತ ಮಾದಾರ ಮಹಾಸಭಾ ಸಂಘಟನೆ ತುಂಬಾ ಚುರುಕಾಗಿ ಸಂಘಟನೆಯಾಗುತ್ತಿದೆ. ಪ್ರತಿಯೊಬ್ಬರೂ ಸಂಘದ ಸದಸ್ಯತ್ವವನ್ನು ನೋಂದಾಯಿಸಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಮುಖಂಡ ಎಚ್.ಎಂ.ಟಿ.ನರಸೀಯಪ್ಪ, ದಸಾಪ ಅಧ್ಯಕ್ಷ ಮಹರಾಜು, ವಕೀಲ ನರಸಿಂಹಮೂರ್ತಿ, ಬಸವನಹಳ್ಳಿ ನಾಗರಾಜು, ಸಣ್ಣರಾಮಯ್ಯ, ಎಸ್.ಕೆ.ರಂಗನಾಥ್, ಎಸ್.ಸಂಜಿವಯ್ಯ ಮತ್ತಿತರರು ಇದ್ದರು.