M B Patil | ಸಚಿವ ಎಂ.ಬಿ. ಪಾಟೀಲ್
ಬೆಂಗಳೂರು: ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡುವುದು ಸಂಪೂರ್ಣವಾಗಿ ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಸಚಿವ ಎಂ ಬಿ ಪಾಟೀಲ್ (M B Patil) ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಎಲ್ಲ ಹಿರಿಯ ನಾಯಕರು ಒಟ್ಟಿಗೆ ಕುಳಿತು ಚರ್ಚಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.
ಖಾತೆಗಳ ವಿಚಾರದಲ್ಲಿ ಏನೇ ಚರ್ಚೆಗಳಾಗಿದ್ದರೂ, ಎಲ್ಲವೂ ಅಧಿಕೃತವಾಗಿ ಘೋಷಣೆಯಾದಾಗಲೇ ಅಂತಿಮವಾಗಲಿದ್ದು, ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರಗಳನ್ನು ನಾವೆಲ್ಲರೂ ಅತ್ಯಂತ ಸಂತೋಷದಿಂದ ಸ್ವೀಕಾರ ಮಾಡಿದ್ದೇವೆ ಎಂದರು. ಡಾ. ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ನೀಡಿರುವುದನ್ನು ಸ್ವಾಗತಿಸಿದ ಸಚಿವರು, ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ಅತ್ಯಂತ ಅರ್ಹ ವ್ಯಕ್ತಿಯಾಗಿದ್ದಾರೆ (Most Deserving Person). ಈ ಹಿಂದೆ ಅವರು ಸಾಕಷ್ಟು ರಾಜಕೀಯ ಏರುಪೇರುಗಳನ್ನು ಅನುಭವಿಸಿದ್ದಾರೆ (Sufferer), ಆದರೂ ಪಕ್ಷಕ್ಕೆ ಅವರ ಕೊಡುಗೆ ತುಂಬಾ ದೊಡ್ಡದಿದೆ, ಅವರನ್ನು ಡಿಸಿಎಂ ಮಾಡಿರುವುದು ನನಗೂ ಕೂಡ ಬಹಳ ಸಂತೋಷ ತಂದಿದೆ ಎಂದರು.
ಹೈಕಮಾಂಡ್ ಏನು ಮಾಡುತ್ತದೆ ಕಾದು ನೋಡೋಣ!
ಇದೇ ಸಂದರ್ಭದಲ್ಲಿ ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಹುದ್ದೆ ತಪ್ಪಿದ ವಿಚಾರವಾಗಿ ಮಾತನಾಡಿದ ಎಂ ಬಿ ಪಾಟೀಲ್, ಇಂತಹ ನಿರ್ಧಾರಗಳು ನಾಲ್ಕು ಗೋಡೆಗಳ ಮಧ್ಯೆ ಕೆಲವು ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ತೀರ್ಮಾನವಾಗುತ್ತವೆ. ಮೊದಲು ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಆಲೋಚನೆ ಇತ್ತು, ಆಮೇಲೆ ಯಾವುದೇ ಡಿಸಿಎಂ ಬೇಡ ಎಂಬ ಚರ್ಚೆಯೂ ಇತ್ತು. ಆದರೆ ಈಗ ಪರಮೇಶ್ವರ್ ಅವರನ್ನು ಒಬ್ಬರನ್ನೇ ಡಿಸಿಎಂ ಮಾಡಲಾಗಿದೆ. ನಾನಂತೂ ವೈಯಕ್ತಿಕವಾಗಿ ನನಗೆ ಡಿಸಿಎಂ ಮಾಡಿ ಎಂದು ಎಲ್ಲೂ ಕೇಳಿಲ್ಲ. ಮುಂದೆ ಈ ವಿಚಾರದಲ್ಲಿ ಹೈಕಮಾಂಡ್ ಏನು ಮಾಡುತ್ತದೆ ಎಂಬುದನ್ನು ಕಾದು ನೋಡೋಣ ಎನ್ನುತ್ತಾ, ಸಮುದಾಯಕ್ಕೆ ವಿಧಾನ ಪರಿಷತ್ ಸ್ಥಾನ ಕೊಡುವಂತೆ ನಾವು ಗಟ್ಟಿಯಾಗಿಯೇ ಕೇಳುತ್ತೇವೆ ಎಂದು ಹೇಳಿದರು.
ಇನ್ನು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ ಕೆ ಹರಿಪ್ರಸಾದ್ ಬಗ್ಗೆ ಮಾತನಾಡುತ್ತಾ, ಹರಿಪ್ರಸಾದ್ ಅವರು ಕೇಂದ್ರ ಮಟ್ಟದಲ್ಲಿ ಅನೇಕ ಹುದ್ದೆಗಳಲ್ಲಿ ಕೆಲಸ ಮಾಡಿದ ದೊಡ್ಡ ಅನುಭವ ಹೊಂದಿದ್ದಾರೆ. ಕೋಮುವಾದಿಗಳ ವಿರುದ್ಧ ಹೋರಾಟ ಮಾಡುವ ಗಟ್ಟಿ ನಿಲುವು ಅವರದ್ದಾಗಿದೆ ಎಂದು ಶ್ಲಾಘಿಸಿದರು.
2028ರಲ್ಲೂ ನಮ್ದೆ ಸರ್ಕಾರ...
ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ, ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ, ಬಿ.ಕೆ. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ ನಾವೆಲ್ಲರೂ ಸಚಿವರಾಗಿ ಒಟ್ಟಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಈ ಒಗ್ಗಟ್ಟಿನ ಬಲದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ಅಷ್ಟೇ ಅಲ್ಲದೆ, 2029ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.