ಮಂಚದಡಿ ಚಿರತೆ ರೂಪದಲ್ಲಿ ಜವರಾಯ: ಜೀವದ ಹಂಗು ತೊರೆದು ಅತ್ತೆಯನ್ನು ಕಾಪಾಡಿದ ಸೊಸೆಗೆ ಪ್ರಶಂಸೆ! Mysuru Woman 
ರಾಜ್ಯ

ಮಂಚದಡಿ ಚಿರತೆ ರೂಪದಲ್ಲಿ ಜವರಾಯ: ಜೀವದ ಹಂಗು ತೊರೆದು ಅತ್ತೆಯನ್ನು ಕಾಪಾಡಿದ ಸೊಸೆಗೆ ಪ್ರಶಂಸೆ! Mysuru Woman

ಪ್ರಮುಖ ಮುಖ್ಯಾಂಶಗಳು

  • ಮೈಸೂರಿನ ಸಿದ್ದಾರ್ಥನಗರದ ಮನೆಯೊಂದರಲ್ಲಿ ಮಂಚದಡಿ ಅಡಗಿದ್ದ ಚಿರತೆ
  • ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದ ಸೊಸೆ
  • ಸುಜಾತಾ ಅವರ ಸಾಹಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಶಂಸೆ
  • ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿಗೆ ಅವರ ಹೆಸರನ್ನು ಪರಿಗಣಿಸಲು ಸೂಚನೆ
ಮೈಸೂರು: ಮೈಸೂರಿನ ಸಿದ್ದಾರ್ಥನಗರದ ಮನೆಯೊಂದರಲ್ಲಿ ಚಿರತೆ ಮಂಚದಡಿ ಅಡಗಿದ್ದ ವೇಳೆ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಕರೆತಂದ ಸೊಸೆ ಸುಜಾತಾ ( Mysuru Woman ) ಸಾಹಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಆಕಸ್ಮಿಕವಾದರೂ ಅದು ಮಹಿಳೆಯೊಬ್ಬರ ಅಪ್ರತಿಮ ಧೈರ್ಯ ಮತ್ತು ಅತ್ತೆ-ಸೊಸೆಯ ಪವಿತ್ರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಸಚಿವರು ಬಣ್ಣಿಸಿದ್ದಾರೆ.
ತಮ್ಮ ಮನೆಯ ಮಂಚದಡಿ ಚಿರತೆ ಅಡಗಿರುವುದು ತಿಳಿಯುತ್ತಿದ್ದಂತೆಯೇ, ಪ್ರಾಣದ ಹಂಗು ತೊರೆದು ಕೊಠಡಿಗೆ ನುಗ್ಗಿ, ವಯಸ್ಸಾದ ಅತ್ತೆಯನ್ನು ಅಪ್ಪಿಕೊಂಡು ಸುರಕ್ಷಿತವಾಗಿ ಹೊರಗೆ ಕರೆತಂದ ಸುಜಾತಾ ಸಾಹಸ ನಿಜಕ್ಕೂ ರೋಮಾಂಚನಕಾರಿ. ಸಾಕ್ಷಾತ್ ಮೃತ್ಯುವಿನ ದವಡೆಯಿಂದ ಅವರನ್ನು ರಕ್ಷಿಸಿದ ಅವರ ಸಮಯಪ್ರಜ್ಞೆ ಇಡೀ ಮಹಿಳಾ ಕುಲಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.
ಅತ್ತೆ-ಸೊಸೆಯ ಸಂಬಂಧದ ಬಗ್ಗೆ ಸಮಾಜದಲ್ಲಿರುವ ಹಳೆಯ ಕಲ್ಪನೆ ಅಳಿಸಿ, ಸುಜಾತಾ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯಾಗಿ, ಅವರ ಈ ಅಸಾಧಾರಣ ಶೌರ್ಯಕ್ಕೆ ನಾನು ಮನತುಂಬಿ ಶ್ಲಾಘಿಸುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು.
ಸುಜಾತಾ ಅವರ ಈ ಸಾಹಸ ಗೌರವಿಸಲು ಮುಂದಿನ ವರ್ಷದ ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿಗೆ ಅವರ ಹೆಸರನ್ನು ಪರಿಗಣಿಸಲು ಈಗಾಗಲೇ ಸೂಚನೆ ನೀಡಿದ್ದೇನೆ. ಧೈರ್ಯವಂತ ಮಹಿಳೆಯರೇ ಈ ನಾಡಿನ ನಿಜವಾದ ಶಕ್ತಿ. ಅವರ ಈ ಶೌರ್ಯದ ಗಾಥೆ ಮನೆಮನೆಗಳಿಗೆ ತಲುಪಲಿ ಎಂದು ಹೆಬ್ಬಾಳ್ಕರ್​ ತಿಳಿಸಿದ್ದಾರೆ.