ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ: ಎಚ್​ಡಿಕೆ 'ಸ್ಟಿಂಗ್' ಆರೋಪಕ್ಕೆ ಕೃಷ್ಣ ಭೈರೇಗೌಡ ಗರಂ 
ರಾಜ್ಯ

ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ: ಎಚ್​ಡಿಕೆ 'ಸ್ಟಿಂಗ್' ಆರೋಪಕ್ಕೆ ಸಚಿವ ಕೃಷ್ಣ ಭೈರೇಗೌಡ ಗರಂ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ 'ಸ್ಟಿಂಗ್​ ಆಪರೇಷನ್' ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋ​ ಕುರಿತು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಮತ್ತೊಮ್ಮೆ ನೇರವಾಗಿ ಬೀಸಿದ ಚಾಟಿಗೆ ಇದೀಗ ಸಚಿವ ಕೃಷ್ಣ ಭೈರೇಗೌಡ ತಿರುಗೇಟು ನೀಡಿದ್ದಾರೆ.

ಮೊದಲು ಎಚ್​ಡಿಕೆ ಹೇಳಿದ್ದೇನು?

ಇಂದು ಜೆಡಿಎಸ್​ ಕಚೇರಿ ಜೆ.ಪಿ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಚ್​ಡಿಕೆ, ಇದು ಕೇವಲ ಕಟ್ಟುಕತೆ ಎಂದು ತನಿಖಾ ವರದಿ ನೀಡಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದ್ದು, ವಿಡಿಯೋ ಮಾಡಿದವರಿಗೆ ರಕ್ಷಣೆ ನೀಡುವ ಉದ್ದೇಶದಿಂದಲೇ ಈ ತನಿಖೆ ನಡೆಸಲಾಗಿದೆ ಎಂದು ಆರೋಪಿಸಿದರು. ತನಿಖೆ ಪ್ರಾಮಾಣಿಕವಾಗಿ ಆಗಬೇಕು ಮತ್ತು ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ತಾವು ಖುದ್ದಾಗಿ ಕಮಿಷನರ್‌ಗೆ ಹೇಳಿ ಬಂದಿದ್ದೆ ಎಂದರು.

ಇದೆಲ್ಲವೂ ಕ್ಲೀನ್ ಚಿಟ್ ಮತ್ತು ಕಟ್ಟುಕತೆ ಎಂದು ಬಿಂಬಿಸಲಾಗುತ್ತಿದ್ದು, ಬರೋಬ್ಬರಿ 12 ವರ್ಷಗಳ ಹಿಂದೆ ಈ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ, 12 ವರ್ಷಗಳ ನಂತರ ಈ ಪ್ರಕರಣ ಈಗೇಕೆ ಮುನ್ನೆಲೆಗೆ ಬಂತು? ಸ್ವತಃ ಸಿದ್ದರಾಮಯ್ಯನವರೇ ಇದು ಸ್ಟಿಂಗ್ ಆಪರೇಷನ್ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಆರೋಪ ಹೊತ್ತು ಸದ್ಯ ಪಕ್ಷದಿಂದ ಉಚ್ಚಾಟನೆಗೊಂಡಿರುವ ಕೃಪಾ ಆಳ್ವಾ ಅವರನ್ನು ನಿಗಮದ ಅಧ್ಯಕ್ಷೆಯನ್ನಾಗಿ ಮಾಡಿದ್ದು ಸಿದ್ದರಾಮಯ್ಯ. 2023ರಲ್ಲಿ ಕೃಪಾ, ರಾಕೇಶ್ ಶೆಟ್ಟಿ ಜತೆಗೆ ಮತ್ತೋರ್ವ ವ್ಯಕ್ತಿ ಇದ್ದಾನೆ. ಆ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಗಳು ಭೇಟಿಯಾದ್ರಾ? ಆತನ ಹೇಳಿಕೆ ಪಡೆದರಾ? ಕೃಪಾ ಆಳ್ವಾ ಆ ಮುಸ್ಲಿಂ ಮಹಿಳೆಯನ್ನು ಏಕೆ ಕರೆತಂದರು? ಈ ಎಲ್ಲ ಆಯಾಮಗಳಲ್ಲೂ ತನಿಖೆ ಮಾಡಲಾಗಿದೆಯೇ ಎಂದು ಎಚ್​ಡಿಕೆ ಪ್ರಶ್ನಿಸಿದ್ದು, ಈ ಸಂಪೂರ್ಣ ಪ್ರಕರಣದ ಹಿಂದೆ ಬ್ಲ್ಯಾಕ್ ಮೇಲ್ ತಂತ್ರ ಹಾಗೂ ಸಿಡಿ ಸಂಸ್ಕೃತಿ ಇದೆ ಎಂದು ದೂರಿದರು.

ಸಚಿವ ಕೃಷ್ಣಭೈರೇಗೌಡ ಗರಂ

ಕುಮಾರಸ್ವಾಮಿಯವರೇ ಈ ಆರೋಪಿತ ‘ಸ್ಟಿಂಗ್ ವಿಡಿಯೋ’ ಬಿಡುಗಡೆಯ ರೂವಾರಿಯಾಗಿ, ಅವರ ಸೋಶಿಯಲ್ ಮೀಡಿಯಾ ತಂಡವೇ ಇದರಲ್ಲಿ ನೇರವಾಗಿ ಭಾಗಿಯಾಗಿ, ಈ ಕೆಲಸವನ್ನು ನಿರ್ವಹಿಸಲು ದೆಹಲಿಯ ಅವರ ಅಧಿಕೃತ ನಿವಾಸವನ್ನೇ ಬಳಸಿಕೊಳ್ಳಲಾಗಿತ್ತು ಹಾಗೂ ಹಣದ ವಹಿವಾಟು ಕೂಡ ನಡೆದಿತ್ತು. ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ. ಮಾಜಿ ಸಿಎಂರ ಗೌರವಕ್ಕೆ ಧಕ್ಕೆ ತರುವುದು ಮತ್ತು ಇದರ ಆಪಾದನೆಯನ್ನು ಹಾಲಿ ಮುಖ್ಯಮಂತ್ರಿಯವರ ಮೇಲೆ ಹಾಕುವುದು. ರಾಜಕೀಯ ಕುತಂತ್ರದ ಮಾಸ್ಟರ್ ಸ್ಟ್ರೋಕ್ ಎಂದರು.

ಕೆಲವೊಮ್ಮೆ ನಿಜ ಜೀವನವೇ ಕಾಲ್ಪನಿಕ ಕಥೆಗಳಿಗಿಂತಲೂ ಹೆಚ್ಚು ವಿಲಕ್ಷಣವಾಗಿರುತ್ತದೆ. ಇಂತಹ ಉನ್ನತ ಹಂತದಲ್ಲಿರುವ ಜನರು ಸಾರ್ವಜನಿಕ ಜೀವನವನ್ನು ಮತ್ತಷ್ಟು ಅಧೋಗತಿಗೆ ತಳ್ಳುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಜನರ ಕೆಲಸ ಮಾಡಲು ಬಳಸಿಕೊಳ್ಳುವ ಬದಲಾಗಿ, ಪ್ರತಿದಿನ ಇದನ್ನೇ ಮಾಡುತ್ತಾ ಕೂತರೆ, ರಾಜಕೀಯ ಕುತಂತ್ರಗಳೇ ಏಕೈಕ ಕೆಲಸವಾಗಿಬಿಡುತ್ತದೆ. ಅತ್ಯಂತ ಕೀಳುಮಟ್ಟದ ಚಾರಿತ್ರ್ಯ ವಧೆಯಲ್ಲಿ ತೊಡಗುವುದು ಮತ್ತು ಅದರ ಹೊರೆಯನ್ನು ಜಾಣತನದಿಂದ ಬೇರೆಯವರ ಮೇಲೆ ಹೊರಿಸುವುದು. ಇದು ಜನರಿಗೆ ಮಾಡುವ ಅನ್ಯಾಯ ಎಂದಿದ್ದಾರೆ.

ಜನರು ನಮ್ಮನ್ನು ಈ ಸ್ಥಾನದಲ್ಲಿ ಕೂರಿಸಿರುವುದು ಇದಕ್ಕಾಗಿಯೇ? ಜನರು ನಮಗೆ ಈ ಅಧಿಕಾರ ಮತ್ತು ಸ್ಥಾನವನ್ನು ನೀಡಿದ್ದು ಇದಕ್ಕೇನಾ? ಬೇರೆಯವರು ಅಧಿಕಾರದಲ್ಲಿ ಇರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇಷ್ಟೆಲ್ಲಾ ಮಾಡಬೇಕೇ? ಕೇವಲ ದ್ವೇಷ ಮತ್ತು ಅಸಹಿಷ್ಣುತೆಯಿಂದಾಗಿ ಈ ಮಟ್ಟಕ್ಕೆ ಇಳಿಯಬೇಕೇ? ಸಾರ್ವಜನಿಕ ಜೀವನದಲ್ಲಿ ಆರೋಪಗಳು, ಟೀಕೆಗಳು ಇವೆಲ್ಲ ಒಂದು ಭಾಗ. ಆದರೆ, ಇದೊಂದೇ ನಮ್ಮ ಕೆಲಸ ಆಗಿಬಿಟ್ಟರೆ, ಜನ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ.

ಇಷ್ಟು ಕೀಳುಮಟ್ಟಕ್ಕೆ ಇಳಿದು ಇದನ್ನೇ ತಮ್ಮ ಏಕೈಕ ಕೆಲಸವನ್ನಾಗಿ ಮಾಡಿಕೊಳ್ಳುವುದು ಜನರಿಗೆ ಮಾಡುವ ದ್ರೋಹ ಮಾತ್ರವಲ್ಲ, ಇಡೀ ರಾಜಕೀಯ ವ್ಯವಸ್ಥೆಯ ಮರ್ಯಾದೆ ಮತ್ತಷ್ಟು ಹಾಳು ಮಾಡುತ್ತದೆ ಎಂದು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.