ಸಚಿವ ಕೃಷ್ಣಬೈರೇಗೌಡ ಮತ್ತು ಸಿಎಂ ಡಿಕೆಶಿ 
ರಾಜ್ಯ

ರಾಜ್ಯ ಸರ್ಕಾರದಲ್ಲಿ ಇನ್ನೂ ಬಗೆಹರಿಯದ ಖಾತೆ ಕ್ಯಾತೆ: ದೆಹಲಿಗೆ ತೆರಳಿದ ಸಚಿವ ಕೃಷ್ಣಬೈರೇಗೌಡ; ನಾಳೆ ಡಿಕೆಶಿಯೂ ಪ್ರಯಾಣ | Krishna Byre Gowda

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಡಿ.ಕೆ.ಶಿವಕುಮಾರ್ ಅವರಿಗೆ ಖಾತೆ ಹಂಚಿಕೆ ಕ್ಯಾತೆಯ ಸಮಸ್ಯೆ ಇನ್ನೂ ಮುಗಿದಿಲ್ಲ. ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ರೂ, ಹೊಸದಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ(Krishna Byre Gowda) ಅವರು ಅಪೂರ್ಣ ಖಾತೆ ನೀಡಿದ ಹಿನ್ನೆಲೆ ಅಸಮಾಧಾನಗೊಂಡಿದ್ದಾರೆ.
ಸಚಿವರಾಗಿ ಪ್ರಮಾಣಚನ ಸ್ವೀಕರಿಸಿದ ಬಳಿಕ ಕೃಷ್ಣಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲಾಗಿದೆ. ಆದರೆ ಅದರ ಭಾಗವಾಗಿರುವ BDA, BMRDL ನಿಗಮಗಳನ್ನು ಸಿಎಂ ತಮ್ಮ ಬಳಿಯೇ ಇಟ್ಟುಕೊಂಡು ಅಪೂರ್ಣ ಖಾತೆ ನೀಡಿದ್ದು, ಅವರನ್ನು ಕೆರಳಿಸಿದೆ. ಈ ಹಿನ್ನೆಲೆ ವರಿಷ್ಠರ ಭೇಟಿಗೆ ನಿನ್ನೆ ರಾತ್ರಿಯೇ ಶಾಸಕ ರಿಜ್ವಾನ್ ಅರ್ಷದ್ ಜೊತೆ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಖಾತೆಯಲ್ಲಿ ಪ್ರಮುಖ ನಿಗಮಗಳೇ ಇಲ್ಲದಿದ್ದರೆ ಹೇಗೆ? ಬೆಂಗಳೂರು ಅಭಿವೃದ್ಧಿಯನ್ನು ಮಾಡೋದು ಹೇಗೆ? ಕೊಟ್ಟರೆ ಎಲ್ಲವನ್ನು ಒಟ್ಟಿಗೆ‌ ಕೊಡಲಿ. ಇಲ್ಲದಿದ್ದರೆ ಬೆಂಗಳೂರು ಅಭಿವೃದ್ಧಿ ಖಾತೆ ಬೇಡ ಎಂದು ಹೈಕಮಾಂಡ್ ಬಳಿ ಮನವಿ ಮಾಡಲು ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಈ ಕುರಿತು ಮಾತನಾಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, ಬಿಡಿಎ, ಬಿಎಂಆರ್‌ಡಿಎ ಬಿಟ್ಟು ಖಾತೆ ಕೊಟ್ಟಿದ್ದಾರೆ ಎಂದು ಕೃಷ್ಣ ಬೈರೇಗೌಡರು ಹೇಳಿದ್ದಾರೆ. ಅದು ಅಪೂರ್ಣ, ಹೀಗಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಯೋಚನೆ ಮಾಡ್ತೀನಿ ಅಂತ ಹೇಳಿದ್ದಾರೆ. ಒಬ್ಬೊಬ್ಬರಿಗೆ ಒಂದು ಕಾಯಿಲೆ ಇರುತ್ತೆ, ರಾಜಕಾರಣದಲ್ಲಿ ಇದು ಇದ್ದಿದ್ದೇ ಎಂದು ಹೇಳಿದ್ದಾರೆ.

ನಾಳೆ ಸಿಎಂ ಡಿಕೆಶಿ ದೆಹಲಿಗೆ ಪ್ರಯಾಣ

ಕರ್ನಾಟಕ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿ.ಕೆ.ಶಿವಕುಮಾರ್ ನಾಳೆ ಮೊದಲ ಬಾರಿಗೆ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ನಾಳೆ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಲಿದ್ದು, ಬಳಿಕ ಪ್ರಧಾನಿ ಮೋದಿ ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಧಾನಿ ಭೇಟಿ ನಂತರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿರುವ ಡಿಕೆಶಿ, ಸಚಿವರ ಖಾತೆ ಕಗ್ಗಟ್ಟು ವಿಚಾರ ಸೇರಿದಂತೆ ಎರಡನೇ ಹಂತದ ಸಂಪುಟ ವಿಸ್ತರಣೆ ಕುರಿತು ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.