ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಈಶ್ವರ ಬಿ ಖಂಡ್ರೆ 
ರಾಜ್ಯ

ಅಡುಗೆ ಅನಿಲ ಬೆಲೆ ಏರಿಕೆ ಸಚಿವ ಈಶ್ವರ ಖಂಡ್ರೆ ಆಕ್ರೋಶ

ಬೆಂಗಳೂರು: ಗೃಹ ಬಳಕೆಯ 14.2 ಕೆ.ಜಿ. ಅಡುಗೆ ಅನಿಲ ಸಿಲಿಂಡರ್ ದರವನ್ನು 29 ರೂ. ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಈಶ್ವರ ಬಿ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 3 ತಿಂಗಳಲ್ಲಿ 2ನೇ ಬಾರಿ ಅಡುಗೆ ಅನಿಲ ದರ ಏರಿಕೆ ಮಾಡಿದ್ದು, ಜನರ ಮೇಲೆ 90ರೂ. ಹೊರೆ ಬಿದ್ದಿದೆ. ಇದರಿಂದ ಬಡವರು, ಮಧ್ಯಮವರ್ಗದವರು ನಲುಗಿ ಹೋಗಿದ್ದಾರೆ. ಇದೆಲ್ಲವೂ ಕೇಂದ್ರ ಸರ್ಕಾರದ ದುರಾಡಳಿತದ ಫಲ ಎಂದು ಖಂಡ್ರೆ ಆರೋಪಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಕಾರ್ಯಕಾಲದಲ್ಲಿ 3 -4 ರೂ. ದರ ಹೆಚ್ಚಳವಾದರೂ ತಲೆಯ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿಗರು ಈಗ ಏಕೆ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಈಗ ಬಡವರ ಬಗ್ಗೆ ಕಾಳಜಿ ಎಲ್ಲಿ ಹೋಯಿತು ಎಂದು ಸಚಿವರು ಪ್ರಶ್ನಿಸಿದರು.
ವಾಣಿಜ್ಯ ಬಳಕೆಯ ಸಿಲಿಂಡರ್ ದರ 3200 ರೂ. ದಾಟಿದ್ದು, ಹೊಟೆಲ್ಗಳಲ್ಲಿ ತಿಂಡಿ ತಿನಿಸುಗಳ ದರ ಹೆಚ್ಚಳ ಆಗಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಜೀವನಾವಶ್ಯಕ ವಸ್ತುಗಳ ದರವೂ ಗಗನಕ್ಕೆ ಏರಿದೆ. ಬಡವರು, ಮಧ್ಯಮ ವರ್ಗದವರ ಬದುಕು ದುಸ್ತರವಾಗುತ್ತಿದೆ. ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ನೀಡಿರುವುದರಿಂದ ಜನ ಕೇಂದ್ರ ಸರ್ಕಾರದ ಈ ಹೊರೆ ಹೊರುವ ಶಕ್ತಿ ಪಡೆದಿದ್ದಾರೆ. ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಜನರೇ ಬೀದಿಗಿಳಿದು ಬುದ್ಧಿಕಲಿಸುವ ದಿನ ದೂರವಿಲ್ಲ ಎಂದು ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದರು.