ದರಸಗುಪ್ಪೆ ಗ್ರಾಮದ ಶ್ರೀರಂಗಪಟ್ಟಣ-ಪಾಂಡವಪುರ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರನನ್ನು ಸಚಿವ ಎಚ್.ಸಿ.ಬಾಲಕೃಷ್ಣ ಚಿಕಿತ್ಸೆಗೆ ಕಳುಹಿಸಿದರು. 
ರಾಜ್ಯ

ಗಾಯಾಳು ಯುವಕನಿಗೆ ನೆರವಾದ ಸಚಿವ

ಪ್ರಮುಖ ಮುಖ್ಯಾಂಶಗಳು

  • ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತ
  • ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರ
ಶ್ರೀರಂಗಪಟ್ಟಣ: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರನ ತುರ್ತು ಚಿಕಿತ್ಸೆಗೆ ನೆರವಾಗುವ ಮೂಲಕ ಸಚಿವ ಎಚ್.ಸಿ.ಬಾಲಕೃಷ್ಣ ಮಾನವೀಯತೆ ಮೆರೆದರು.
ತಾಲೂಕಿನ ದರಸಗುಪ್ಪೆ ಗ್ರಾಮದ ಶ್ರೀರಂಗಪಟ್ಟಣ-ಪಾಂಡವಪುರ ಹೆದ್ದಾರಿ ರಸ್ತೆಯಲ್ಲಿ ಕಬ್ಬು ತುಂಬಿದ್ದ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮೇಲುಕೋಟೆ ಬಳಿಯ ಗ್ರಾಮವೊಂದರ ಯುವಕ ಕೀರ್ತಿ(21)ಎಂಬಾತ ಗಾಯಗೊಂಡು ನರಳಾಡುತ್ತಿದ್ದ. ಇದೇ ಸಮಯಕ್ಕೆ ಸಚಿವ ಎಚ್.ಸಿ.ಬಾಲಕೃಷ್ಣ ಅದೇ ಮಾರ್ಗದಲ್ಲಿ ತೆರಳುತ್ತಿದ್ದು, ಅಪಘಾತ ಕಂಡ ತಕ್ಷಣವೇ ವಾಹನ ನಿಲ್ಲಿಸಿ ಪರಿಶೀಲಿಸಿದರು.
ನಂತರ ಗಾಯಾಳು ಯುವಕನನ್ನು ಬೆಂಗಾವಲು ಕಾರಿನಲ್ಲಿ ಸ್ಥಳೀಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದರು. ಜತೆಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮೊಬೈಲ್ ಮೂಲಕ ಕರೆ ಮಾಡಿ ವೈದ್ಯರಿಗೆ ಸೂಚನೆ ನೀಡಿದರು. ಅಪಘಾತ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.