ಇಸ್ಲಾಂ ಧರ್ಮ ಎಲ್ಲಕ್ಕಿಂತ ಶ್ರೇಷ್ಠ... ವಿವಾದದ ಬೆನ್ನಲ್ಲೇ ಹೊಸ ಧರ್ಮ ಸ್ಥಾಪನೆ ಮಾಡ್ತೀನಿ ಅಂದ್ರು ಸಚಿವ ಬಸವರಾಜ ರಾಯರೆಡ್ಡಿ! Basavaraj Rayareddy  
ರಾಜ್ಯ

ಇಸ್ಲಾಂ ಧರ್ಮ ಎಲ್ಲಕ್ಕಿಂತ ಶ್ರೇಷ್ಠ... ವಿವಾದದ ಬೆನ್ನಲ್ಲೇ ಹೊಸ ಧರ್ಮ ಸ್ಥಾಪನೆ ಮಾಡ್ತೀನಿ ಅಂದ್ರು ಸಚಿವ ಬಸವರಾಜ ರಾಯರೆಡ್ಡಿ! Basavaraj Rayareddy

ಪ್ರಮುಖ ಮುಖ್ಯಾಂಶಗಳು

  • ಹೊಸ ಧರ್ಮ ಸ್ಥಾಪನೆ ಮಾಡುತ್ತೇನೆ ಎಂದ ಸಚಿವ ಬಸವರಾಜ ರಾಯರೆಡ್ಡಿ
  • ಹಿಂದೂ ಧರ್ಮದ ಸ್ಥಾಪಕರು ಯಾರು ಎಂದು ಸವಾಲು ಹಾಕಿದ ಸಚಿವರು
  • ಬಿಜೆಪಿ ನಾಯಕರೊಂದಿಗೆ ಧರ್ಮದ ಕುರಿತು ಚರ್ಚೆಗೆ ಆಹ್ವಾನ ನೀಡಿದ ರಾಯರೆಡ್ಡಿ
  • ರಾಜೀನಾಮೆ ಕೇಳುವ ವಿಪಕ್ಷಗಳ ನಾಯಕರಿಗೆ ಖಡಕ್​ ತಿರುಗೇಟು ನೀಡಿದ ಸಚಿವರು
ಕೊಪ್ಪಳ: ಎಲ್ಲ ಧರ್ಮಕ್ಕಿಂತ ಇಸ್ಲಾಂ ಧರ್ಮ ಶ್ರೇಷ್ಠ ಎಂಬ ತಮ್ಮ ಹಿಂದಿನ ಹೇಳಿಕೆಯಿಂದ ಭುಗಿಲೆದ್ದ ವಿವಾದದ ಕುರಿತು ಸ್ಪಷ್ಟನೆ ನೀಡಲು ಹೋಗಿ ಸಚಿವ ಬಸವರಾಜ ರಾಯರೆಡ್ಡಿ ( Basavaraj Rayareddy ) ಅವರು ಮತ್ತಷ್ಟು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಕೊಪ್ಪಳದ ಯಲಬುರ್ಗಾ ತಾಲೂಕಿನ ಬೋದುರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ, ತಾವು ಕುರಾನ್ ಗ್ರಂಥದಲ್ಲಿರುವ ಮಾನವೀಯತೆಯ ಸಂದೇಶದ ಬಗ್ಗೆ ಮಾತ್ರ ಮಾತನಾಡಿದ್ದೇನೆ ಹೊರತು, ಹಿಂದೂ ಧರ್ಮವನ್ನು ಕಡೆಗಣಿಸುವ ಅಥವಾ ಕೆಟ್ಟದ್ದು ಎಂದು ಹೇಳಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಎಲ್ಲಾ ಒಳ್ಳೆಯ ವಿಚಾರಗಳನ್ನು ಒಟ್ಟುಗೂಡಿಸಿ ನಾನೇ ಯಾಕೆ ಹೊಸ ಧರ್ಮವೊಂದನ್ನು ಸ್ಥಾಪಿಸಬಾರದು ಎಂದು ಪ್ರಶ್ನಿಸಿದ್ದಾರೆ.
ವಿಪಕ್ಷ ನಾಯಕರಾದ ಸುನಿಲ್ ಕುಮಾರ್ ಹಾಗೂ ಆರ್. ಅಶೋಕ್ ತಮ್ಮ ಹೇಳಿಕೆಯನ್ನು ಖಂಡಿಸಿರುವುದಕ್ಕೆ ತಿರುಗೇಟು ನೀಡಿರುವ ರಾಯರೆಡ್ಡಿ, ತಾಕತ್ತಿದ್ದರೆ ನನ್ನೊಂದಿಗೆ ಧರ್ಮದ ಕುರಿತು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ. ಹಿಂದೂ ಧರ್ಮವು ಜನರಿಂದಲೇ ರೂಪಿತವಾಗಿರುವ ಧರ್ಮವಾಗಿದ್ದು, ಹಿಂದೂ ಧರ್ಮದ ಸ್ಥಾಪಕರು ಯಾರು ಎಂಬುದನ್ನು ವಿಪಕ್ಷದವರು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ. ತಾನು ಶರಣ ತತ್ವಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡವನಾಗಿದ್ದು, ಎಲ್ಲಾ ಧರ್ಮಗಳ ಸ್ಥಳಗಳು ಹಾಗೂ ಸಾರಾಂಶವನ್ನು ಅಧ್ಯಯನ ಮಾಡಿದ್ದೇನೆ ಎಂದಿರುವ ಅವರು, ಮೆಕ್ಕಾಗೆ ಹೋಗಬೇಕೆಂಬ ಆಸೆ ಇತ್ತಾದರೂ ಮತಾಂತರಗೊಳ್ಳಲು ಇಷ್ಟವಿಲ್ಲದೆ ಅಲ್ಲಿಗೆ ತೆರಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಧರ್ಮ ನಿಷ್ಠೆಯ ಬಗ್ಗೆ ಮಾತನಾಡುವ ವಿಪಕ್ಷಗಳಿಗೆ ತಿರುಗೇಟು ನೀಡಿದ ಸಚಿವರು, ನಾಳೆ ತಾನು ಸುತ್ತೂರು ಮಠ ಹಾಗೂ ಹೆಂಡತಿ ಮಕ್ಕಳ ಜತೆಗೆ ಚಾಮುಂಡಿ ದೇವಸ್ಥಾನಕ್ಕೂ ಭೇಟಿ ನೀಡುವುದಾಗಿ ತಿಳಿಸಿದರು. ತಾನು ಯಾವುದೇ ಸ್ವಾರ್ಥ ಸಾಧನೆಗಾಗಿ ಅಥವಾ ತೋರಿಕೆಗಾಗಿ ದೇವಸ್ಥಾನ ಹಾಗೂ ಮಠಗಳಿಗೆ ಹೋಗುವುದಿಲ್ಲ ಎಂದ ಅವರು, ಈಶ್ವರಪ್ಪ ಸೇರಿದಂತೆ ಹಲವು ನಾಯಕರು ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವುದನ್ನು ಲೇವಡಿ ಮಾಡಿದರು. ಮುಸ್ಲಿಮರನ್ನು ಹೊಗಳಿದರೆ ತಮಗೆ ಅಯೋಗ್ಯರು ಎಂದು ಹಣೆಪಟ್ಟಿ ಕಟ್ಟುವ ವಿಪಕ್ಷದವರು ರಾಜೀನಾಮೆ ಕೇಳುವುದಾದರೆ ಕೇಳಲಿ, ಅದರಿಂದ ತನಗೆ ಯಾವುದೇ ಬೇಸರವಿಲ್ಲ ಎಂದು ಮುಕ್ತವಾಗಿ ನುಡಿದಿದ್ದಾರೆ.
ಕೊನೆಯದಾಗಿ, ತಾನು ಯಾವ ಧರ್ಮಕ್ಕೆ ಸೇರಿದವನು ಎಂಬುದನ್ನು ಸ್ಪಷ್ಟಪಡಿಸಿದ ಬಸವರಾಜ ರಾಯರೆಡ್ಡಿ, ತನಗೆ ಎಲ್ಲಾ ಧರ್ಮಗಳ ಬಗ್ಗೆಯೂ ಸಮಾನ ಗೌರವವಿದ್ದು, ಯಾರೂ ಯಾವ ಧರ್ಮವನ್ನಾದರೂ ಆಚರಿಸಿಕೊಳ್ಳಲಿ ಅದಕ್ಕೆ ತನ್ನ ಯಾವುದೇ ವಿರೋಧವಿಲ್ಲ ಎಂದಿದ್ದಾರೆ. ಆದರೆ, ಸಚಿವರ ಹಂತದಲ್ಲಿರುವ ಜವಾಬ್ದಾರಿಯುತ ವ್ಯಕ್ತಿಯೊಬ್ಬರು ಹೊಸ ಧರ್ಮ ಸ್ಥಾಪನೆಯ ಮಾತುಗಳನ್ನಾಡಿರುವುದು ಹಾಗೂ ವಿಪಕ್ಷಗಳ ನಾಯಕರಿಗೆ ಬಹಿರಂಗ ಸವಾಲು ಹಾಕಿರುವುದು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.