ಕೃಷ್ಣಬೈರೇಗೌಡ- ಕಂದಾಯ ಸಚಿವರು 
ರಾಜ್ಯ

ಭೂ ದಾಖಲೆ ಸ್ಕ್ಯಾನಿಂಗ್ ವಿಳಂಬಕ್ಕೆ ಸಿಟ್ಟಾದ ಸಚಿವ

ಬೆಂಗಳೂರು: ಭೂ ದಾಖಲೆಗಳ ಸ್ಕ್ಯಾನಿಂಗ್ ಬಗ್ಗೆ ಅಸಡ್ಡೆ ತೋರುತ್ತಿರುವ ತಹಸೀಲ್ದಾರ್‌ಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಳಿಬಿಡಿಸಿದ್ದಾರೆ.
ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಎಲ್ಲ ತಹಸೀಲ್ದಾರ್‌ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು, ಭೂ ಸುರಕ್ಷಾ ಯೋಜನೆಯ ಮಾಹಿತಿ ಪಡೆದರು.
ದಿನಕ್ಕೆ ಸರಾಸರಿ 12 ಸಾವಿರ ಪುಟ ಭೂ ದಾಖಲೆ ಸ್ಕ್ಯಾನ್ ಮಾಡಬೇಕೆಂದು ಗುರಿ ನೀಡಲಾಗಿತ್ತು. ಆದರೆ, ಕೆಲ ತಾಲೂಕುಗಳಲ್ಲಿ ಸ್ಕ್ಯಾನಿಂಗ್ 8 ಸಾವಿರ ಪುಟ ದಾಟಿಲ್ಲ. ಜತೆಗೆ ಸ್ಕ್ಯಾನಿಂಗ್ ಕೆಲಸಕ್ಕೆ ಪ್ರತಿ ತಾಲೂಕಿಗೆ ತಲಾ 8 ಜನ ಡೇಟಾ ಆಪರೇಟರ್ ನೀಡಿದರೂ ಕೆಲ ಕಡೆ ಪ್ರಗತಿ ಕುಂಠಿತವಾಗಿತ್ತು. ಇದಕ್ಕೆ ಅಸಮರ್ಪಕ ಉತ್ತರ ನೀಡಿದ ಗದಗ ಜಿಲ್ಲೆ ಶಿರಹಟ್ಟಿ ತಹಸೀಲ್ದಾರ್ ಮೇಲೆ ಸಚಿವರು ಗರಂ ಆದರು. ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮತ್ತು ಹಿಂದುಳಿದ ಜಿಲ್ಲೆಗಳಾದ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಕೆಲಸ ಸಂಪೂರ್ಣ ಮುಗಿದಿದೆ. ಆದರೆ, ಬೆಂಗಳೂರು ನಗರ, ಶ್ರೀರಂಗಪಟ್ಟಣ, ಮದ್ದೂರು, ಪಾಂಡವಪುರ, ಮೈಸೂರಿನ ಕೆಲ ತಾಲೂಕುಗಳಲ್ಲಿ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಬೆಳ್ತಂಗಡಿ, ಮೂಡುಬಿದರೆ, ಪುತ್ತೂರು, ಚಳ್ಳಕೆರೆ, ಕಂಪ್ಲಿ, ಸಿರಗುಪ್ಪ ಸೇರಿ 60 ತಾಲೂಕುಗಳಲ್ಲಿ ಗುರಿ ಮೀರಿ ದಿನಕ್ಕೆ 20 ಸಾವಿರ ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಹೊನ್ನಾವರದಲ್ಲಿ ದಿನಕ್ಕೆ 40 ಸಾವಿರ ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಹೀಗೆ ಬೇರೆ ತಾಲೂಕಿನಲ್ಲಿ ಸಾಧ್ಯವಾದದ್ದು ಇತರರಿಂದ ಏಕೆ ಸಾಧ್ಯವಿಲ್ಲ ಎಂದು ನಿರ್ಲಕ್ಷ್ಯವಹಿಸಿದ್ದ ತಹಸೀಲ್ದಾರ್‌ಗಳಿಗೆ ಕ್ಲಾಸ್ ತೆಗೆದುಕೊಂಡರು.
ಇದೇ ವೇಳೆ ೌತಿ ಖಾತೆಗಳ ವಿವರ ಪಡೆದ ಸಚಿವರು, ಕುಟುಂಬದ ವ್ಯಾಜ್ಯಗಳಿಲ್ಲದ ಆಸ್ತಿಗಳನ್ನು ಸಾಧ್ಯವಾದಷ್ಚು ಶೀಘ್ರದಲ್ಲಿ ಮುಗಿಸುವಂತೆ ಸೂಚನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೌತಿಖಾತೆ ಆಂದೋಲನ ಬಹುತೇಕ ಮುಕ್ತಾಯವಾಗಿದ್ದ ಕಾರಣ ಅವರನ್ನು ಶ್ಲಾಸಿದರು. ಬೆಂಗಳೂರು ಗ್ರಾಮಾಂತರ, ರಾಯಚೂರು, ಹಾವೇರಿ ಜಿಲ್ಲೆಗಳಲ್ಲಿ ಅಧಿಕ ಪ್ರಕರಣ ಬಾಕಿ ಇರುವುದು ಸಭೆಯಲ್ಲಿ ಬೆಳಕಿಗೆ ಬಂದಿದೆ.
ಪೋಡಿ ದುರಸ್ತಿ ಯೋಜನೆಯಲ್ಲಿ ಡಿಡಿಎಲ್ಆರ್ ಮತ್ತು ಎಡಿಎಲ್ಆರ್‌ಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ(ಪ್ರಭಾರಿ) ರಿತ್ವಿಕ್ ಪಾಂಡೆ, ಕಂದಾಯ ಆಯುಕ್ತೆ ಮೀನಾ ನಾಗರಾಜ್, ಸರ್ವೇ ಆಯುಕ್ತ ವೆಂಕಟರಾಜು ಇದ್ದರು.