ಬೆಂಗಳೂರು : ಉದ್ಯೋಗ, ವ್ಯವಹಾರ ಇತ್ಯಾದಿ ಕಾರಣಕ್ಕೆ ದೇಶ ಮತ್ತು ಜಗತ್ತಿನ ಬೇರೆ ಬೇರೆ ಕಡೆಗಳಿಂದ ರಾಜ್ಯಕ್ಕೆ ಬರುವ ಎಲ್ಲರೊಂದಿಗೂ ಬೆರೆತು ಅವರನ್ನು ನಮ್ಮವರಂತೆ ಕಾಣುವ ದೊಡ್ಡಗುಣ ಕನ್ನಡಿಗರಲ್ಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿದರು.
ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಜಂಟಿಯಾಗಿ ಆಯೋಜಿಸಿದ್ದ ನೃಪತುಂಗ ಮತ್ತು ಮಯೂರವರ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಕುವೆಂಪು ಅವರ ’ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ಸಾಲುಗಳು ಪ್ರತಿಯೊಬ್ಬ ಕನ್ನಡಿಗನಿಗೂ ಸ್ಫೂರ್ತಿಯಾಗಬೇಕು. ಕನ್ನಡಿಗರು ಪರಭಾಷಿಕರನ್ನು ಎಂದಿಗೂ ಪರಕೀಯರಂತೆ ಕಾಣುವುದಿಲ್ಲ. ಹೊರರಾಜ್ಯ ಹಾಗೂ ಹೊರದೇಶಗಳಿಂದ ಕರ್ನಾಟಕಕ್ಕೆ ಬರುವವರನ್ನೂ ನಮ್ಮವರೇ ಎಂಬ ಭಾವನೆಯಿಂದ ಪ್ರೀತಿಸಿ, ಗೌರವದಿಂದ ಕಾಣುತ್ತೇವೆ. ಇದೇ ಕನ್ನಡಿಗರ ದೊಡ್ಡ ಗುಣ. ಈ ಆತಿಥ್ಯ ಮತ್ತು ಸೌಹಾರ್ದದ ಕಾರಣದಿಂದಲೇ ಅನ್ಯಭಾಷಿಕರು ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ವಿವರಿಸಿದರು.
ದೇಶದಲ್ಲೇ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕೊಡಮಾಡುವ ಪ್ರತಿಷ್ಠಿತ ನೃಪತುಂಗ ಸಾಹಿತ್ಯ ಪ್ರಶಸ್ತಿ 2023ನೇ ಸಾಲಿಗೆ ಪ್ರೊ. ಎಸ್.ಜಿ. ಸಿದ್ದರಾಮಯ್ಯ, 2024ನೇ ಸಾಲಿಗೆ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಹಾಗೂ 2025ನೇ ಸಾಲಿಗೆ ಡಾ. ಸರಜೂ ಕಾಟ್ಕರ್ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ 7 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಇದೇ ವೇಳೆ ಮಯೂರ ವರ್ಮ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಯುವ ಸಾಧಕರನ್ನು ಗುರುತಿಸಿ ವರ್ಷಕ್ಕೆ ಐವರಂತೆ 3 ವರ್ಷದ ಪ್ರಶಸ್ತಿಗೆ ಒಟ್ಟು 15 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯ, ಉಪಾಧ್ಯಕ್ಷ ನಿಕೇತರಾಜ್, ಬಿಎಂಟಿಸಿ ಮಾಜಿ ಎಂಡಿ ಉಪೇಂದ್ರ ತ್ರಿಪಾಠಿ, ಎಂಡಿ ರಘುನಂದನಮೂರ್ತಿ, ಕನ್ನಡ ಕ್ರಿಯಾ ಸಮಿತಿ ಮುಖಂಡ ವ.ಚ.ಚನ್ನೇಗೌಡ, ಕಸಾಪ ಆಡಳಿತಾಧಿಕಾರಿ ದಯಾನಂದ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಶಾಲೆಗಳನ್ನು ಖಾಸಗೀಕರಣ ಮಾಡುವ ಸರ್ಕಾರದ ನಿರ್ಧಾರ ಕನ್ನಡಕ್ಕೆ ೋರ ಅನ್ಯಾಯ. ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿಗೆ ಇದು ವಿರುದ್ಧವಾಗಿದೆ. ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿ ಇಲ್ಲದಿದ್ದರೆ; ಆಡಳಿತದಲ್ಲಿ ಕನ್ನಡ ಉಳಿಯುವುದಿಲ್ಲ. ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ಕಡಿವಾಣವಿರಬೇಕು. ಪ್ರಥಮ ಭಾಷೆಯಾಗಿ ಕನ್ನಡ ಕಲಿಸಲು ಕಾನೂನು ತರಬೇಕು.ಪ್ರೊ.ಎಸ್.ಜಿ.ಸಿದ್ದರಾಮಯ್ಯ, ನೃಪತುಂಗ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು