ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ
ಬೆಂಗಳೂರು: ಖನಿಜ ಹಕ್ಕುಗಳು ಮತ್ತು ಖನಿಜ ಇರುವ ಜಮೀನಿನ ಮೇಲೆ ತೆರಿಗೆ ವಿಧಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಸೀಮಿತಗೊಳಿಸುವ ಪ್ರಸ್ತಾವಿತ ನಿಯಮಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸರ್ಕಾರಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಪತ್ರ ಬರೆದಿದ್ದಾರೆ.
ಸಂಸತ್ತಿನಲ್ಲಿ ಅಂಗೀಕರಿಸಿದ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ-2026 ಕರ್ನಾಟಕ ಸರ್ಕಾರಕ್ಕೆ ಕಳವಳ ವ್ಯಕ್ತವಾಗಿದೆ. ರಾಜ್ಯಗಳಿಗೆ ಭೂಮಿ ಮತ್ತು ಖನಿಜ ಹಕ್ಕುಗಳ ಮೇಲಿನ ತೆರಿಗೆಗೆ ಸಂಬಂಧಿಸಿದ ಅಧಿಕಾರಗಳನ್ನು ನೀಡಲಾಗಿದೆ. 2024ರ ಜುಲೈ 25ರಂದು ಸುಪ್ರೀಂ ಕೋರ್ಟ್‌ನ ಕೂಡ ರಾಜ್ಯಗಳ ಈ ಅಧಿಕಾರವನ್ನು ಪುನರುಚ್ಚರಿಸಿದೆ. ಕೇಂದ್ರಕ್ಕೆ ಖನಿಜ ಅಭಿವೃದ್ಧಿ ನಿಯಂತ್ರಿಸುವ ಸಂವಿಧಾನಾತ್ಮಕ ಅಧಿಕಾರವಿದ್ದರೂ,ಅದನ್ನು ಬಳಸಿಕೊಂಡು ರಾಜ್ಯಗಳ ಸಂವಿಧಾನಾತ್ಮಕ ಹಣಕಾಸಿನ ಸ್ವಾಯತ್ತತೆ ಕುಗ್ಗಿಸುವ ಪ್ರಯತ್ನ ಮಾಡಬಾರದು. ಸಂವಿಧಾನಾತ್ಮಕ ಮತ್ತು ಹಣಕಾಸಿನ ಪರಿಣಾಮಗಳನ್ನು ಹೊಂದಿರುವ ಕಾನೂನು ರೂಪಿಸುವ ಮೊದಲು ಖನಿಜ ಉತ್ಪಾದಕ ರಾಜ್ಯಗಳೊಂದಿಗೆ ಸಮಾಲೋಚಿಸುವುದು ಅಗತ್ಯವಾಗಿತ್ತು.
ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಕರ್ನಾಟಕ ವಿಧಾನಸಭೆಯು ಕರ್ನಾಟಕ (ಖನಿಜ ಹಕ್ಕುಗಳು ಮತ್ತು ಖನಿಜಯುಕ್ತ ಭೂಮಿ) ತೆರಿಗೆ ವಿಧೇಯಕ, 2024 ಅನ್ನು ಅಂಗೀಕರಿಸಿದೆ. ಜಿಎಸ್‌ಟಿ ನಂತರ ರಾಜ್ಯಗಳ ಸ್ವತಂತ್ರ ತೆರಿಗೆ ಆದಾಯದ ಅವಕಾಶಗಳು ಕಡಿಮೆ ಆದರೂ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಕೃಷಿ, ಕಲ್ಯಾಣ ಕಾರ್ಯಕ್ರಮಗಳು ಮತ್ತು ಮೂಲಸೌಕರ್ಯ ಜವಾಬ್ದಾರಿಗಳು ರಾಜ್ಯಗಳ ಮೇಲೆ ಮುಂದುವರಿದಿವೆ.
ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ಪರಿಸರ ಹಾನಿ, ರಸ್ತೆ ಮತ್ತು ಮೂಲಸೌಕರ್ಯಗಳ ಹಾನಿ ಹಾಗೂ ಸ್ಥಳೀಯ ಸಮುದಾಯಗಳ ಮೇಲಿನ ಪರಿಣಾಮಗಳನ್ನು ರಾಜ್ಯಗಳೇ ಎದುರಿಸಬೇಕಾಗಿದೆ. ಆದ್ದರಿಂದ ಖನಿಜ ಸಂಪನ್ಮೂಲಗಳ ಮೇಲೆ ರಾಜ್ಯಗಳಿಗೆ ಹಣಕಾಸಿನ ಅಧಿಕಾರ ಉಳಿಯುವುದು ನ್ಯಾಯಸಮ್ಮತವಾಗಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.