ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಇಲಾಖೆ ಹಾಗೂ ಚಾಮುಲ್ ವತಿಯಿಂದ ಆಯೋಜಿಸಿದ್ದ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ಗಣೇಶ್ ಪ್ರಸಾದ್ ಪ್ರಮಾಣಪತ್ರ ವಿತರಿಸಿದರು. ನಂಜುಂಡಪ್ರಸಾದ್, ಮಧುಶಂಕರ್, ಶಿವನಾಗಪ್ಪ ಇದ್ದರು. 
ರಾಜ್ಯ

ಹೈನು ಉದ್ಯಮ ಪ್ರೋತ್ಸಾಹಿಸಲು ಹಾಲು ಕರೆಯುವ ಸ್ಪರ್ಧೆ

ಗುಂಡ್ಲುಪೇಟೆ: ಹೈನು ಉದ್ಯಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಶುಪಾಲನಾ ಇಲಾಖೆ ರಾಸುಗಳ ಪ್ರದರ್ಶನ ಹಾಗೂ ಹಸುಗಳ ಹಾಲು ಕರೆಯುವ ಸ್ಪರ್ಧೆ ಆಯೋಜಿಸಿದ್ದು, ಹೈನುಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಶುಪಾಲನಾ ಇಲಾಖೆ ಹಾಗೂ ಚಾಮುಲ್ ವತಿಯಿಂದ ಶುಕ್ರವಾರ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ರಾಸುಗಳ ಪ್ರದರ್ಶನ ಹಾಗೂ ಹಸುಗಳ ಹಾಲು ಕರೆಯುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಹೆಚ್ಚಿನ ರೈತರು ಜೀವನೋಪಾಯಕ್ಕಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಅಲ್ಲದೆ ಗ್ರಾಮಾಂತರ ಪ್ರದೇಶಗಳ ಜಾತ್ರೆಗಳು ಹಾಗೂ ಮೈಸೂರಿನಂತಹ ದೊಡ್ಡ ನಗರಗಳಲ್ಲಿಯೂ ಸಹ ರಾಸುಗಳ ಪ್ರದರ್ಶನ ಹಾಗೂ ಹಾಲು ಕರೆಯುವ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಗುತ್ತಿದೆ. ಆದ್ದರಿಂದ ತಾಲೂಕಿನ ರೈತರು ಹಾಗೂ ಹೈನುಗಾರರನ್ನು ಉತ್ತೇಜಿಸುವ ಸಲುವಾಗಿ ಗ್ರಾಮದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗುವುದು ಎಂದು ಹೇಳಿದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಾದೇಶ್, ಡಾ.ನಾಗೇಂದ್ರಸ್ವಾಮಿ, ಡಾ.ಗವಿಸ್ವಾಮಿ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಸ್.ಮಧುಶಂಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಾಗಪ್ಪ ಇತರರಿದ್ದರು.
ನಗದು ಬಹುಮಾನ: ಹಾಲು ಕರೆಯುವ ಸ್ಪರ್ಧೆ ಮತ್ತು ಮಿಶ್ರತಳಿ ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ 13 ರಾಸುಗಳು ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮೊದಲ ಬಹುಮಾನವಾಗಿ ಹೆಚ್ಚು ಅಧಿಕ ಹಾಲು ಕರೆದ ರಾಸುಗಳಿಗೆ 10 ಸಾವಿರ ರೂ., 7.5 ಸಾವಿರ ರೂ. ಮತ್ತು 5 ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಜತೆಗೆ ನಡೆದ ಮಿಶ್ರತಳಿ ಕರುಗಳ ಸ್ಪರ್ಧೆಯಲ್ಲಿ 21 ಜರ್ಸಿ ಮತ್ತು ಎಚ್‌ಎಫ್ ಕರುಗಳು ಭಾಗವಹಿಸಿದ್ದವು. ಭಾಗವಹಿಸಿದ ಎಲ್ಲ ರಾಸುಗಳಿಗೆ ಮತ್ತು ಉತ್ತಮ ಕರುಗಳಿಗೆ ಹಾಲಿನ ಕ್ಯಾನ್ ನೀಡಿ ಹೈನುಗಾರಿಕೆ ಬಗ್ಗೆ ಉತ್ತೇಜನ ನೀಡಲು ಪ್ರೋತ್ಸಾಹಿಸಲಾಯಿತು.