Mid-day meal management: A challenge for teachers 
ರಾಜ್ಯ

ಶಿಕ್ಷಕರಿಗೆ ಸವಾಲಾದ ಬಿಸಿಯೂಟ ನಿರ್ವಹಣೆ

ಶಿಡ್ಲಟ್ಟ : ತರಕಾರಿ ಮತ್ತು ಮೊಟ್ಟೆ ಬೆಲೆ ದಿನೇದಿನೆ ಏರಿಕೆಯಾಗುತ್ತಿರುವುದು ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ನಿರ್ವಹಣೆ ಮಾಡುವ ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ.
ತಾಲೂಕಿನಾದ್ಯಂತ 200ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಿಸಿಯೂಟ ಯೋಜನೆ ಜಾರಿಯಲ್ಲಿದೆ. ಸಾವಿರಾರು ಮಕ್ಕಳು ಬಿಸಿಯೂಟ ಸವಿಯುತ್ತಾರೆ. ಆದರೆ ಈಗಿನ ಮಾರುಕಟ್ಟೆ ದರದಲ್ಲಿ ಸರ್ಕಾರ ನೀಡುತ್ತಿರುವ ಅನುದಾನದಲ್ಲಿ ಗುಣಮಟ್ಟದ ಊಟ ನೀಡುವುದು ಅಸಾಧ್ಯವಾಗಿದೆ ಎಂಬುದು ಶಿಕ್ಷಕರ ಅಳಲು.
ಕಳೆದ ವರ್ಷ 4.50 ರೂ. ಇದ್ದ ಮೊಟ್ಟೆಯ ಬೆಲೆ ಇದೀಗ 7 ರಿಂದ 8 ರೂ. ತಲುಪಿದೆ. ಟೊಮ್ಯಾಟೊ, ಬೀನ್ಸ್​, ಕ್ಯಾರೆಟ್​ ಸೇರಿ ಎಲ್ಲ ತರಕಾರಿಗಳ ಬೆಲೆ ಕೆ.ಜಿ.ಗೆ 50 ರಿಂದ 80 ರೂ. ದಾಟಿದೆ. ಅಡುಗೆ ಎಣ್ಣೆ, ಬೇಳೆ ಕಾಳುಗಳ ಬೆಲೆಯೂ ದುಬಾರಿಯಾಗಿದೆ.

ಮೊಟ್ಟೆ ಮತ್ತು ತರಕಾರಿ ಬೆಲೆ ಏರಿಕೆಯಾಗಿದೆ. ಈ ಬಗ್ಗೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ರಾಜ್ಯ ಸರ್ಕಾರ ಅನುದಾನ ಹೆಚ್ಚು ಮಾಡಿದರೆ ಅನುಕೂಲವಾಗಲಿದೆ. ಪ್ರಸ್ತುತ ಶಿಕ್ಷಕರಿಗೆ ಹೊರೆ ಜಾಸ್ತಿಯಾಗಿರುವುದು ನಿಜವಾದರೂ ಅನಿವಾರ್ಯವಾಗಿ ಬಿಸಿಯೂಟ ಕಾರ್ಯಕ್ರಮ ನಡೆಸಬೇಕಿದೆ.

— ಆಂಜನೇಯ, ಸಹಾಯಕ ನಿರ್ದೇಶಕ ಅಕ್ಷರ ದಾಸೋಹ, ಶಿಡ್ಲಘಟ್ಟ
ಸರ್ಕಾರ ಪ್ರತಿ ಮಗುವಿಗೆ ಪ್ರಾಥಮಿಕ ಹಂತಕ್ಕೆ 5.45 ರೂ. ಮತ್ತು ಪ್ರೌಢಶಾಲಾ ಹಂತಕ್ಕೆ 8.17 ರೂಪಾಯಿ ಅಡುಗೆ ವೆಚ್ಚಕ್ಕೆ ನೀಡುತ್ತಿದೆ. ಈ ಹಣದಲ್ಲಿ ಮೊಟ್ಟೆ, ತರಕಾರಿ, ಎಣ್ಣೆ, ಉಪ್ಪು, ಮಸಾಲೆ ಖರೀದಿಸಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ.
ಶಿಕ್ಷಕರಿಗೆ ಹೆಚ್ಚುವರಿ ಹೊರೆ: ಮಕ್ಕಳಿಗೆ ನೀಡುವ ಆಹಾರದಲ್ಲಿ ರಾಜಿ ಮಾಡಿಕೊಳ್ಳಲು ಆಗುವುದಿಲ್ಲ. ಅನುದಾನ ಸಾಲದಿದ್ದಾಗ ಶಿಕ್ಷಕರೇ ತಮ್ಮ ಕೈಯಿಂದ ಹಣ ಹಾಕಿ, ಎರವಲು ತಂದು ಯೋಜನೆ ನಡೆಸುವ ಸ್ಥಿತಿ ಬಂದಿದೆ. ಕೆಲವೆಡೆ ಸಾಲ ಮಾಡಿ ಅಡುಗೆ ಸಾಮಗ್ರಿ ತರುತ್ತಿದ್ದೇವೆ.
ಬಿಲ್​ ತಿಂಗಳುಗಟ್ಟಲೆ ಬಾಕಿ ಉಳಿದಿದೆ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಇದರಿಂದಾಗಿ ಬೋಧನಾ ಕಾರ್ಯಕ್ಕೂ ಅಡ್ಡಿಯಾಗುತ್ತಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಮಾರುಕಟ್ಟೆಗೆ ಅಲೆದು, ಲೆಕ್ಕಪತ್ರ ನಿಭಾಯಿಸುವುದರಲ್ಲೇ ಶಿಕ್ಷಕರ ಸಮಯ ವ್ಯರ್ಥವಾಗುತ್ತಿದೆ.
ವಾರಕ್ಕೊಂದೇ ಮೊಟ್ಟೆ ವಿತರಣೆ
ಬೆಲೆ ಏರಿಕೆಯಿಂದಾಗಿ ಕೆಲವು ಶಾಲೆಗಳಲ್ಲಿ ತರಕಾರಿ ಪ್ರಮಾಣ ಕಡಿಮೆ ಮಾಡುವುದು, ವಾರದಲ್ಲಿ ಎರಡು ಬಾರಿ ನೀಡಬೇಕಾದ ಮೊಟ್ಟೆಯನ್ನು ಒಮ್ಮೆ ನೀಡುವುದು ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿವೆ. ಇದು ಮಕ್ಕಳ ಪೌಷ್ಟಿಕಾಂಶದ ಮೇಲೆ ನೇರ ಪರಿಣಾಮ ಬೀರುತ್ತದೆ.
ಕೂಡಲೇ ಸರ್ಕಾರ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಿಸಿಯೂಟದ ಅನುದಾನವನ್ನು ದ್ವಿಗುಣಗೊಳಿಸಬೇಕು, ಮೊಟ್ಟೆ ಮತ್ತು ತರಕಾರಿಗೆ ಪ್ರತ್ಯೇಕ ದರ ನಿಗದಿ ಮಾಡಿ, ನೇರವಾಗಿ ಪೂರೈಕೆ ಮಾಡಬೇಕು. ಶಿಕ್ಷಕರಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸಬೇಕು. ಜತೆಗೆ ಅವರು ಹೆಚ್ಚು ಬೋಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಶಾಲಾಭಿವೃದ್ಧಿ ಸಮಿತಿಗಳು ಒತ್ತಾಯಿಸಿವೆ.