ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಇಂಧನ ಇಲಾಖೆಯಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀಟರ್ ರೀಡರ್‌ಗಳು ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಕನಿಷ್ಠ ವೇತನ ಸೇರಿದಂತೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ಮತ್ತು ಎಸ್ಕಾಂ ಹೊರಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ.
ಪ್ರಸ್ತುತ ಮೀಟರ್‌ಗಳ ಸಂಖ್ಯೆಗೆ ಅನುಗುಣವಾಗಿ ಪಾವತಿ ಮಾಡುವ ಪದ್ಧತಿ ಜಾರಿಯಲ್ಲಿದ್ದು, ಇದರಿಂದ ಮೀಟರ್ ರೀಡರ್‌ಗಳಿಗೆ ಸಮರ್ಪಕ ವೇತನ ದೊರೆಯುತ್ತಿಲ್ಲ. ಪ್ರತಿ ಮೀಟರ್ ಆಧಾರದ ವೇತನ ಪದ್ಧತಿ ರದ್ದುಪಡಿಸಿ, ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು. ಮೀಟರ್ ರೀಡರ್‌ಗಳು ಪ್ರತಿದಿನ ಮನೆ, ಅಂಗಡಿ ಹಾಗೂ ವಿವಿಧ ವಾಣಿಜ್ಯ ಪ್ರದೇಶಗಳಿಗೆ ತೆರಳಿ ವಿದ್ಯುತ್ ಮೀಟರ್‌ಗಳ ಮಾಪನ ಮಾಡಬೇಕಾಗಿದ್ದು, ಕೆಲ ಸಂದರ್ಭಗಳಲ್ಲಿ ಅಪಾಯಕಾರಿ ಪರಿಸ್ಥಿತಿಗಳಲ್ಲಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಹೀಗಾಗಿ ನೌಕರರಿಗೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸುವುದರ ಜತೆಗೆ ಸೂಕ್ತ ವಿಮಾ ಸೌಲಭ್ಯ ಕಲ್ಪಿಸಬೇಕು ಎಂದು ಸಂಘದ ಅಧ್ಯಕ್ಷ ಲೀಲಾಸಾಗರ್ ಎಂ.ಎಸ್. ಆಗ್ರಹಿಸಿದ್ದಾರೆ.
ಮೀಟರ್ ರೀಡರ್‌ಗಳ ಕೆಲಸದ ಸ್ವರೂಪ ಹಾಗೂ ಹೊಣೆಗಾರಿಕೆಗೆ ಅನುಗುಣವಾಗಿ ನ್ಯಾಯಯುತ ವೇತನ ಮತ್ತು ಸೇವಾ ಸೌಲಭ್ಯ ಕಲ್ಪಿಸಬೇಕು. ಗುತ್ತಿಗೆ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸಂಘದ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು.ಮೇಲುಕೋಟೆ ಬೆಟ್ಟಸ್ವಾಮಿಗೌಡ, ಗೌರವಾಧ್ಯಕ್ಷ