ರಾಜ್ಯದಲ್ಲಿ ಮಳೆ ಅಭಾವ ಮುಂದುವರಿಕೆ 
ರಾಜ್ಯ

ಇನ್ನೂ ಮುಂದೆ ರಾಜ್ಯದಲ್ಲಿ ಮಳೆ ಕೊರತೆ ಜಾಸ್ತಿ: ಹವಾಮಾನ ತಜ್ಞರು ಆತಂಕ- rainfall deficit in the future

ಬೆಂಗಳೂರು: ಎರಡು ವಾರಗಳಿಂದ ಕರಾವಳಿ ಮತ್ತು ಮಲೆನಾಡಿನ ವ್ಯಾಪ್ತಿಯ ಪ್ರದೇಶಗಳಲ್ಲಿ ಅಬ್ಬರಿಸಿದ್ದ ಮಳೆ ಈಗಾಗಲೇ ಕ್ಷೀಣವಾಗಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆ ಅಭಾವ ಮುಂದುವರಿದಿದೆ. ಇನ್ನೂ ಮುಂದೆ ರಾಜ್ಯಾದ್ಯಂತ ಮಳೆ ಕೊರತೆ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಈಗಾಗಲೇ ನೈಋತ್ಯ ಮಾನ್ಸೂನ್ ಆವರಿಸಿದೆ. ಮಾನ್ಸೂನ್ ಪ್ರಬಲವಾಗಿರುವ ಕಾರಣ ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದೆ. ಆದರೆ. ಕರ್ನಾಟಕ ಮತ್ತು ತಮಿಳುನಾಡು ಸೇರಿ ದಕ್ಷಿಣ ಭಾರತದಲ್ಲಿ ಮಾರುತಗಳು ದುರ್ಬಲವಾಗಿವೆ. ಇದರ ಪರಿಣಾಮ ದಿನದಿಂದ ದಿನಕ್ಕೆ ಮಳೆ ಕಡಿಮೆಯಾಗುತ್ತಿದೆ. ಪ್ರಸ್ತುತ ಅರಬ್ಬಿ ಸಮುದ್ರ ಅಥವಾ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ಅಥವಾ ತೇವಾಂಶ ಭರಿತ ಮೋಡಗಳು ಸೃಷ್ಟಿಯಾಗಲು ಪೂರಕ ವಾತಾವರಣ ಇಲ್ಲ. ರಾಜ್ಯದಲ್ಲೆಡೆ ಮೋಡ ಕವಿದ ವಾತಾವರಣ ಇರಲಿದ್ದು, ಕೆಲ ಪ್ರದೇಶಗಳಲ್ಲಿ ಮಾತ್ರ ಸಾಧಾರಣ ಮಳೆ ಸುರಿಯಲಿದೆ. ಆದರೆ, ದೊಡ್ಡ ಪ್ರಮಾಣದಲ್ಲಿ ವರ್ಷಧಾರೆಯಾಗುವುದಿಲ್ಲ. ಗಾಳಿ ವೇಗ ಜಾಸ್ತಿ ಇರಲಿದೆ ಎಂದರು.
ಕರಾವಳಿಯಲ್ಲಿ 417 ಮಿಮೀ ಮಳೆ:
ಜು.1ರಿಂದ ಜು.10ವರೆಗೆ ಮುಂಗಾರು ಪ್ರಬಲವಾಗಿದ್ದ ಕಾರಣ ಕರಾವಳಿಯಲ್ಲಿ 417 ಮತ್ತು ಮಲೆನಾಡಿನ ಭಾಗದಲ್ಲಿ 227 ಮಿಮೀ ಮಳೆಯಾಗಿದೆ. ಕರಾವಳಿಯಲ್ಲಿ ವಾಡಿಕೆಯಂತೆ 361 ಮಿಮೀ ಮಳೆಯಾಗಬೇಕಿತ್ತು ಆದರೆ, 417 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ. 16 ಅಧಿಕವಾಗಿ ಬಿದ್ದಿದೆ. ಉಡುಪಿ 439, ದಕ್ಷಿಣ ಕನ್ನಡ 439, ಉತ್ತರ ಕನ್ನಡದಲ್ಲಿ 400 ಮಿಮೀ ಮಳೆಯಾಗಿದೆ. ಕೊಡಗು 331, ಶಿವಮೊಗ್ಗ 281, ಚಿಕ್ಕಮಗಳೂರು 209, ಹಾಸನದಲ್ಲಿ 117 ಮಿಮೀ ವರ್ಷಧಾರೆಯಾಗಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಭಾವ ಉಂಟಾಗಿದೆ.