ತುಂಬಿ ಹರಿಯುತ್ತಿದ್ದ ನದಿಗೆ ಇಳಿದ ಮೆಸ್ಕಾಂ ನೌಕರರು
- 12 ಮನೆಗಳಿಗೆ ಕರೆಂಟ್ ಕೊಡಲು MESCOM ಸಾಹಸ
- ತುಂಬಿ ಹರಿಯುತ್ತಿದ್ದ ನದಿಗೆ ಇಳಿದ ಮೆಸ್ಕಾಂ ನೌಕರರು
- ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಸಿಬ್ಬಂದಿಯ ಕಾರ್ಯಾಚರಣೆ
MESCOM Workers Viral Video
: ಒಂದೆಡೆ ಧಾರಾಕಾರ ಮಳೆ, ಮತ್ತೊಂದೆಡೆ ತುಂಬಿ ಹರಿಯುತ್ತಿದ್ದ ಹೊಳೆ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲೂ 12 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ (MESCOM) ಸಿಬ್ಬಂದಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯಲ್ಲಿ ನಡೆದ ಈ ಸಾಹಸಮಯ ಕಾರ್ಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆಗೆ ವ್ಯಕ್ತವಾಗಿದೆ.
ಬೆಟ್ಟಂಪಾಡಿಯ ಡೂಮಡ್ಕದಲ್ಲಿ ಸೀರೆ ನದಿ ಉಕ್ಕಿ ಹರಿದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮರ ಬಿದ್ದು ಎರಡು ವಿದ್ಯುತ್ ತಂತಿಗಳು ನದಿಗೆ ಬಿದ್ದಿದ್ದರಿಂದ 12 ಮನೆಗಳು ಕತ್ತಲಲ್ಲಿದ್ದವು. ಮಾಹಿತಿ ತಿಳಿದ ಮೆಸ್ಕಾಂ ಸಿಬ್ಬಂದಿ ಬಂಡೆ ನವಾಜ್, ಪ್ರವೀಣ್ ಹಾಗೂ ಸ್ಥಳೀಯರೊಬ್ಬರು ಪ್ರವಾಹದ ನೀರಿನಲ್ಲಿ ಈಜಿ ಮತ್ತೊಂದು ದಡ ತಲುಪಿ ತಂತಿ ಜೋಡಿಸಿದರು. ಬಸವರಾಜ್ ಹಾಗೂ ಇತರ ಸಿಬ್ಬಂದಿ ಅವರಿಗೆ ಸಹಾಯ ಮಾಡಿದ್ರು.
ಮಳೆ ನಡುವೆಯೂ ಕರಂಟ್ ಕನೆಕ್ಷನ್
ಮಳೆಯ ಜತೆ ನೀರು ತುಂಬಿದ್ದರೂ ಸಿಬ್ಬಂದಿ ತಂತಿ ಜೋಡಿಸುವ ಕೆಲಸವನ್ನು ಮುಗಿಸಿದರು. ಬಳಿಕ 12 ಮನೆಗಳಿಗೆ ಮತ್ತೆ ಕರೆಂಟ್ ಬಂತು. ಬೆಟ್ಟಂಪಾಡಿ ಮೆಸ್ಕಾಂ ಕಿರಿಯ ಎಂಜಿನಿಯರ್ ಪುಟ್ಟು ಜೆ.ಸ್ಥಳದಲ್ಲಿದ್ದರು. ಈ ಬಗ್ಗೆ ಮಾತನಾಡಿದ ಬಂಡೆ ನವಾಜ್, ಮಳೆಗಾಲದಲ್ಲಿ ನದಿ ತುಂಬಿ ಹರಿಯುತ್ತಿರುವಾಗ ವೈರ್ ಜೋಡಿಸುವುದು ತುಂಬಾ ಕಷ್ಟದ ಕೆಲಸ ಎಂದಿದ್ದಾರೆ.
ಸೋಷಿಯಲ್ ಮಿಡಿಯಾದಲ್ಲಿ ವಿಡಿಯೊ ವೈರಲ್
ಈ ಕಾರ್ಯಾಚರಣೆಯ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು. ತಮ್ಮ ಜೀವವನ್ನು ಲೆಕ್ಕಿಸದೆ ಮನೆಗಳಿಗೆ ವಿದ್ಯುತ್ ಪೂರೈಸಲು ಸಾಹಸ ಮಾಡಿದ ಮೆಸ್ಕಾಂ ವೀರರ ಕಾರ್ಯಕ್ಕೆ ಭಾರೀ ಜನ ಮೆಚ್ಚುಗೆ ಪಾತ್ರವಶಗಿದೆ. ಪ್ರತಿಕೂಲ ಹವಾಮಾನದಲ್ಲೂ ಕರ್ತವ್ಯ ನಿಭಾಯಿಸಿದ ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳೂ ಅಭಿನಂದಿಸಿದ್ದಾರೆ,(ಏಜೆನ್ಸೀಸ್).