ವಿಜಯಪುರ ಹೊರ ವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಉತ್ತರ ಕರ್ನಾಟಕ ಭಾಗದ ಬುಡಕಟ್ಟು ಮಹಿಳೆಯರ ಸಬಲೀಕರಣ, ಸಮಸ್ಯೆಗಳು ಹಾಗೂ ಸವಾಲುಗಳು ಎಂಬ ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕೀರ್ಣ ಕಾರ್ಯಕ್ರಮ ನಡೆಯಿತು. ಪ್ರೊ. ಚಂದ್ರಶೇಖರ ಆರ್.ವಿ., ಸಕ್ಪಾಲ್ ಹೂವಣ್ಣ, ಬಿ.ಎಲ್. ಲಕ್ಕಣ್ಣನವರ ಮತ್ತಿತರರಿದ್ದಾರೆ. 
ರಾಜ್ಯ

ಮಹಿಳೆಯರ ಮೇಲೆ ಪುರುಷರ ನಾಯಕತ್ವ ಹೆಚ್ಚು

ಪ್ರಮುಖ ಮುಖ್ಯಾಂಶಗಳು

  • ಪ್ರೊ. ಚಂದ್ರಶೇಖರ ಆರ್.ವಿ. ಹೇಳಿಕೆ
  • ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರಣ
ವಿಜಯಪುರ: ಜಾತಿ ವ್ಯವಸ್ಥೆ ಇಂತಹ ಪರಿಸ್ಥಿತಿಗಳ ನಡುವೆಯೂ ಕೆಲವು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಪ್ರೊ. ಚಂದ್ರಶೇಖರ ಆರ್.ವಿ. ಹೇಳಿದರು.
ನಗರ ಹೊರ ವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನೆ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕ ಭಾಗದ ಬುಡಕಟ್ಟು ಮಹಿಳೆಯರ ಸಬಲೀಕರಣ, ಸಮಸ್ಯೆಗಳು ಹಾಗೂ ಸವಾಲುಗಳು ಎಂಬ ವಿಷಯ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಹೆಣ್ಣುಮಕ್ಕಳು ಲಭಿಸಿದ ಅವಕಾಶಗಳನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ತಮ್ಮ ಜೀವನದ ಜತೆಗೆ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯಬೇಕೆಂದು ಸಲಹೆ ನೀಡಿದರು.
ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರ ಮೇಲೆ ಪುರುಷರ ನಾಯಕತ್ವ ಹೆಚ್ಚಾಗಿ ಕಾಣುತ್ತಿದೆ. ಆದ್ದರಿಂದ ಮಹಿಳೆಯರಿಗೆ ಪೂರ್ಣ ಸ್ವಾತಂತ್ರೃ ಸಿಗದ ಪರಿಸ್ಥಿತಿ ಉಂಟಾಗುತ್ತಿದೆ. ಬುಡಕಟ್ಟು ಸಮುದಾಯದವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ತಮ್ಮ ಹಕ್ಕುಗಳಿಗಾಗಿ ಮಹತ್ವದ ಪಾತ್ರ ವಹಿಸಿರುವುದು ನೆನಪಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಸಕ್ಪಾಲ್ ಹೂವಣ್ಣ ಮಾತನಾಡಿ, ಇಂತಹ ಕಾರ್ಯಕ್ರಮಗಳು ಆಯೋಜನೆಯಾಗುತ್ತಿರುವುದು ವಿದ್ಯಾರ್ಥಿಗಳಿಗೆ ಹಾಗೂ ನಮ್ಮ ವಲಯದ ಜನರಿಗೆ ಬುಡಕಟ್ಟು ಸಮುದಾಯಗಳ ಕುರಿತು ತಿಳಿದುಕೊಳ್ಳಲು ಸಹಾಯಕವಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಬಿ.ಎಲ್. ಲಕ್ಕಣ್ಣನವರ ಮಾತನಾಡಿ, ಬುಡಕಟ್ಟು ಮಹಿಳೆಯರ ಸಮಸ್ಯೆಗಳು ಕೇವಲ ಅವರಿಗಷ್ಟೇ ಸೀಮಿತವಾಗಿಲ್ಲ, ಅವು ಎಲ್ಲ ಮಹಿಳೆಯರ ಸಮಸ್ಯೆಗಳಾಗಿವೆ. ಎರಡು ದಿನಗಳ ಕಾಲ ನಡೆದ ಈ ವಿಚಾರ ಸಂಕೀರ್ಣ ಯಶಸ್ವಿಯಾಗಿ ನೆರವೇರಿದೆ ಎಂದು ಮಾಹಿತಿ ನೀಡಿದರು.
ಡಾ. ಕೃಷ್ಣಮೂರ್ತಿ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಟಿ.ಎಸ್. ಸ್ವಾಗತಿಸಿ ವಂದಿಸಿದರು. ಜಕ್ಕವ್ವ ವಠಾರ ನಿರೂಪಿಸಿದರು.