ಬೀದರ್: ಆನ್‌ಲೈನ್ ಗೇಮ್ ಚಟದಿಂದಾಗಿ ಸಾಲದ ಸುಳಿಗೆ ಸಿಲುಕಿದ ಎಂಬಿಬಿಎಸ್ ಅಂತಿಮ ವರ್ಷದ ಆತ್ಮಹತ್ಯೆಗೆ ಶರಣಾದ ಘಟನೆ ಇಲ್ಲಿನ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್) ವಸತಿ ನಿಲಯದಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬಾಲತ್ಯಾ ತಾಂಡಾ ನಿವಾಸಿ ಅನಿಷ್ಕಾರ್ ಚವ್ಹಾಣ (೨೧) ಮೃತ ವಿದ್ಯಾರ್ಥಿ. ಸೋಮವಾರ ತಡರಾತ್ರಿ ಹಾಸ್ಟೆಲ್ ಕೊಠಡಿಯಲ್ಲಿ ಮಲಗಲು ಹೋಗಿದ್ದ ಅನಿಷ್ಕಾರ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಆನ್‌ಲೈನ್ ಆಟದಲ್ಲಿ ಸಾಕಷ್ಟು ಹಣ ಹಾಕಿ ಸೋತಿದ್ದ. ಇದಕ್ಕಾಗಿ ಸಾಲ ಮಾಡಿದ್ದ. ಸಾಲಗಾರರು ಹಣ ವಾಪಸ್ ಕೇಳುತ್ತಿದ್ದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊಬೈಲ್ ವಾಟ್ಸ್ ಆಪ್‌ನ್ನು ಪರಿಶೀಲಿಸಿದಾಗ ಆನ್‌ಲೈನ್ ಗೇಮ್‌ನಿಂದ ಸಾಲ ಮಾಡಿಕೊಂಡಿರುವುದು ಗೊತ್ತಾಗಿದೆ. ಹಲವು ಆಟಗಳು ಆಡುತ್ತ, ಹಣ ಹಾಕಿ ಕಳೆದುಕೊಂಡಿರುವ ಮಾಹಿತಿ ತಿಳಿದುಬಂದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಪ್ರದೀಪ್ ಗುಂಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಾಸ್ಟೆಲ್ ಮುಂದೆ ವಿದ್ಯಾರ್ಥಿ ತಂದೆಯ ಅಕ್ರಂದನ ಮುಗಿಲು ಮುಟ್ಟಿತ್ತು. ಅವರ ದೂರಿನ ಮೇರೆಗೆ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.