ಬಸವಕಲ್ಯಾಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನ ಮತ್ತು ಶಂಕರ ಪ್ರಸಾದ ದುಬೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಾಸಕ ಶರಣು ಸಲಗರ ಉದ್ಘಾಟಿಸಿದರು. ಎಂಎಲ್ಸಿ ಎಂ.ಜಿ.ಮುಳೆ, ಮಾಲಾ ಬಿ.ನಾರಾಯಣರಾವ, ಬಾಬು ಹೊನ್ನಾನಾಯಕ, ಪ್ರಶಸ್ತಿ ಪುರಸತ ಪತ್ರಕರ್ತೆ ರಶ್ಮಿ ಎಸ್., ಪ್ರಕಾಶ ಕುದರಿ, ಮಡೋಳಪ್ಪ, ಅನೀಲಕುಮಾರ ರಗಟೆ, ದಿಲೀಪಕುಮಾರ ಉತ್ತಮ, ಪೃಥ್ವಿರಾಜ, ಸುನಿಲಕುಮಾರ ಕುಲಕರ್ಣಿ, ಡಿಕೆ ಪ್ರಹ್ಲಾದ ಇತರರಿದ್ದರು.
- ಶಾಸಕ ಶರಣು ಸಲಗರ ಭರವಸೆ
- ಪತ್ರಕರ್ತೆ ರಶ್ಮಿಗೆ ಶಂಕರ ಪ್ರಸಾದ ದುಬೆ ಪ್ರಶಸ್ತಿ ಪ್ರದಾನ
ಬಸವಕಲ್ಯಾಣ: ನಗರದಲ್ಲಿ ನಿವೇಶನ ಇದ್ದರೆ ಬೇಕಾದ ಅನುದಾನವನ್ನು ಕೆಕೆಆರ್ಡಿಬಿಯಿಂದ ಬಿಡುಗಡೆ ಮಾಡಿಸಿ ಪತ್ರಿಕಾ ಭವನ ನಿರ್ಮಿಸಲು ಪ್ರಯತ್ನಿಸುವುದಾಗಿ ಶಾಸಕ ಶರಣು ಸಲಗರ ಭರವಸೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನ ಮತ್ತು ಶಂಕರಪ್ರಸಾದ ದುಬೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆಗಳ ಮೇಲೆ ಜನರ ನಂಬಿಕೆ ಗಾಢವಾಗಿದೆ. ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಮಾಧ್ಯಮಗಳು ಮಾಡುತ್ತವೆ. ರಾಜಕಾರಣಿಗಳಿಂದ ಆಗಿದ ಕೆಲಸ ಮಾಧ್ಯಮದಿಂದ ಸಾಧ್ಯವಾಗುತ್ತದೆ. ಪತ್ರಕರ್ತರು ಅನೇಕ ಸಂಗತಿಗಳನ್ನು ಬರೆದು ಗಮನಕ್ಕೆ ತಂದಿದ್ದು, ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಮಾತನಾಡಿ, ದೇಶದ ಸ್ವಾತಂತ್ರ್ಯ, ಕರ್ನಾಟಕ ಏಕೀಕರಣದಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು. ಪತ್ರಿಕೆಗಳು ಸಮಾಜದ ಕನ್ನಡಿ. ಹಲವು ಸಮಸ್ಯೆಗಳನ್ನು ಅಧಿಕಾರದಲ್ಲಿ ಇರುವವರ ಎದುರಿಗಿಡುವ ಕೆಲಸ ಮಾಡುತ್ತವೆ. ಅಭಿವೃದ್ಧಿ ಜತೆ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಪತ್ರಿಕೆ ಮತ್ತು ಪತ್ರಕರ್ತರ ಪಾತ್ರ ಮಹತ್ವದ್ದು ಎಂದು ಕೊಂಡಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಮಾತನಾಡಿ, ಸಾಮಾಜಿಕ ಬೆಳವಣಿಗೆಗೆ ಮಾಧ್ಯಮ ಹೆಚ್ಚು ಒತ್ತು ನೀಡಿದೆ. ಆಡಳಿತಾತ್ಮಕ ಸುಧಾರಣೆ, ಪ್ರಭುತ್ವದ ಪ್ರಜ್ಞಾಪೂರ್ವಕ ಕೆಲಸಕ್ಕೆ ಅಣಿಯಾಗಲು ಎಚ್ಚರಿಸುತ್ತದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪತ್ರಿಕಾ ಭವನ ನಿರ್ಮಾಣ ಜತೆ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ಒದಗಿಸಲು ಆದ್ಯತೆ ಮೇರೆಗೆ ಶ್ರಮಿಸುವುದಾಗಿ ಹೇಳಿದರು.
ಶಂಕರಪ್ರಸಾದ ದುಬೆ ಪ್ರಶಸ್ತಿ ಸ್ವೀಕರಿಸಿದ ಬೆಂಗಳೂರಿನ ಹಿರಿಯ ಪತ್ರಕರ್ತೆ ರಶ್ಮಿ ಎಸ್. ಮಾತನಾಡಿ, ಓದುವ ಹವ್ಯಾಸ ಕಡಿಮೆಯಾಗುತ್ತಿದ್ದರಿಂದ ಜನರ ನೆಮ್ಮದಿ ಕಳೆದು ಹೋಗುತ್ತಿದೆ. ಪತ್ರಿಕೆಗಳು ಸೇರಿ ಏನನ್ನಾದರೂ ಓದುವಿಕೆ ಇದ್ದರೇನೇ ಅಂತ-ಕರಣದ ಸಮಾಜ ರೂಪಿಸಲು ಸಾಧ್ಯ. ಸಾಮಾಜಿಕ ಕಾಳಜಿ ಪತ್ರಿಕೆ, ಪ್ರಭುತ್ವ ಮತ್ತು ಆಡಳಿತದ ಮೂಲ ಕೇಂದ್ರವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದರ್ಶಿ ಶಶಿಕಾಂತ ಶೆಂಬೆಳ್ಳಿ ಮಾತನಾಡಿ, ಹೊಸ ತಲೆಮಾರಿನ ಝೆನ್ಜಿ ಯುವಕರು ಮುಖ್ಯ ವಾಹಿನಿಯ ಪತ್ರಕರ್ತರ ಭ್ರಮೆ ಅಳಿಸಿದ್ದಾರೆ. ಸತ್ಯ ಶೋಧನೆ, ಪ್ರಾಮಾಣಿಕ ವರದಿಗಾರಿಕೆ ಮಾಡುವ ಬದ್ಧತೆಗೆ ಆದ್ಯತೆಯಿರಲಿ ಎಂದು ಸಲಹೆ ನೀಡಿದರು.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯೆ ಮಾಲಾ ಬಿ.ನಾರಾಯಣರಾವ್, ಸಹಾಯಕ ಆಯುಕ್ತ ಪ್ರಕಾಶ ಕುದರಿ, ಡಿವೈಎಸ್ಪಿ ಮಡೋಳಪ್ಪ, ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ ಮಾತನಾಡಿದರು.
ಭೀಮರಾಯನ ಗುಡಿ ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ಸರ್ಕಾರಿ ನೌಕರರ ಸಂದ ತಾಲೂಕು ಅಧ್ಯಕ್ಷ ದಿಲೀಪಕುಮಾರ ಉತ್ತಮ, ಪತ್ರಕರ್ತರ ಸಂದ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಪ್ಪಾರಾವ್ ಸೌದಿ, ಪ್ರಶಸ್ತಿ ಪ್ರಾಯೋಜಕ ಚಂದ್ರಶೇಖರ ದುಬೆ, ಪತ್ರಕರ್ತರ ಸಂದ ಜಿಲ್ಲಾ ಉಪಾಧ್ಯಕ್ಷ ಪೃಥ್ವಿರಾಜ ಎಸ್., ಖಜಾಂಚಿ ಸುನಿಲಕುಮಾರ ಕುಲಕರ್ಣಿ, ತಾಲೂಕು ಉಪಾಧ್ಯಕ್ಷ ಡಿ.ಕೆ. ಪ್ರಹ್ಲಾದ್, ಕಾರ್ಯದರ್ಶಿ ಶಿವಪುತ್ರ ಪಾಟೀಲ್, ಖಜಾಂಚಿ ಪ್ರದಿಪ ವಿಸಾಜಿ, ಗೌರವ ಸಲಹೆಗಾರರಾದ ವೀರಶೆಟ್ಟಿ ಮಲಶೆಟ್ಟಿ, ಕಲ್ಯಾಣರಾವ ಮದರಗಾಂವಕರ್, ಪತ್ರಕರ್ತರಾದ ವಿಜಯಕುಮಾರ ಬೆಲ್ದೆ, ಮಾಣಿಕ್ ಭುರೆ, ಧನರಾಜ ರಾಜೋಳೆ, ಎಂಡಿ ಖುತಬೋದ್ದಿನ್, ಖಾಜಾ ಸರ್ತಾಜೋದ್ದೀನ್, ಮಲ್ಲಿಕಾರ್ಜುನ ಬಂಡೆ, ವೀರಶೆಟ್ಟಿ ಯರಂಡಗೆ, ಜುಬೇರ್ ನವಾಜ್, ಶರದ್ ದುಬೆ ಮತ್ತು ಶಂಕರಪ್ರಸಾದ ದುಬೆ ಪರಿವಾರದವರು ಉಪಸ್ಥಿತರಿದ್ದರು.
ಸಂದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ ಸ್ವಾಗತಿಸಿದರು. ಜಿಲ್ಲಾ ಕಾರ್ಯಕಾರಿ ಸದಸ್ಯ ಗುರುನಾಥ ಗಡ್ಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ ಪ್ರಶಸ್ತಿ ಪತ್ರ ವಾಚಿಸಿದರು. ಎಂ.ಡಿ. ನೈಮೋದ್ದಿನ್ ವಂದಿಸಿದರು. ಬೆಂಗಳೂರಿನ ಹಿರಿಯ ಪತ್ರಕರ್ತೆ ರಶ್ಮಿ ಅವರಿಗೆ ಶಂಕರ ಪ್ರಸಾದ ದುಬೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಾಲೂಕಿನ ಪತ್ರಕರ್ತರು ಹಾಗೂ ಪತ್ರಿಕಾ ಏಜೆಂಟರನ್ನು ಸನ್ಮಾನಿಸಲಾಯಿತು.
ಕಲ್ಯಾಣದಲ್ಲಿ 12ನೇ ಶತಮಾನದಲ್ಲಿಯೇ ಸಿಟಿಜನ್ ರ್ಜನಲಿಸಂ ಆರಂಭವಾಗಿತ್ತು. ಸಮಾಜದ ಓರೆ&ಕೋರೆಗಳನ್ನು ಗುರುತಿಸುವ, ಸಮಸ್ಯೆಗಳನ್ನು ಗ್ರಹಿಸುವ, ಪರಿಹಾರ ಕಂಡುಕೊಳ್ಳುವ, ಪ್ರಭುತ್ವ ಪ್ರಶ್ನಿಸುವ ಕೆಲಸವನ್ನು ವಚನಕಾರರು ಅಂದೇ ಮಾಡಿದ್ದರು. ಹಾಗೆಯೇ ಅವರು ಸಾತ್ವಿಕ ಮಾರ್ಗ ಅನುಸರಿಸಿದ್ದರು.
— > ರಶ್ಮಿ ಹಿರಿಯ ಪತ್ರಕರ್ತೆ
ಪ್ರಗತಿ ಮತ್ತು ಪರಿವರ್ತನೆಯಲ್ಲಿ ಪತ್ರಿಕೆ ಮತ್ತು ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜನರ ನಿತ್ಯದ ಸಂಗತಿ, ಸಂಕಟ, ಸಮಸ್ಯೆಗಳನ್ನು ಆಳುವವರ ಎದುರಿಗಿಡುವ ಮೂಲಕ ಜನರ ಧ್ವನಿಯಾಗಿ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ.
— > ಎಂ.ಜಿ.ಮುಳೆ ವಿಧಾನ ಪರಿಷತ್ ಸದಸ್ಯ