ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆಗೆ ಕ್ರಮ 
ರಾಜ್ಯ

ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆಗೆ ಕ್ರಮ

ನೈಋತ್ಯ ರೈಲ್ವೆ ಮೇಲ್ವಿಚಾರಣೆ

ಬೆಂಗಳೂರು : ನೈಋತ್ಯ ರೈಲ್ವೆ ವಲಯದ ನಿಲ್ದಾಣ ಮತ್ತು ಕಾಲೋನಿಗಳಲ್ಲಿ ಸುರಕ್ಷಿತ ಹಾಗೂ ಕುಡಿಯಲು ಯೋಗ್ಯವಾದ ನೀರಿನ ಗುಣಮಟ್ಟ ಪರಿಶೀಲನೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ನಿಗದಿತ ನೀರಿನ ಗುಣಮಟ್ಟದ ಮಾನದಂಡಗಳನ್ನು ಪಾಲಿಸುವುದರ ಜೊತೆಗೆ, ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯ ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ನಿರಂತರ ಮೇಲ್ವಿಚಾರಣೆ, ನೀರಿನ ಪರೀಕ್ಷೆ ಮತ್ತು ಗುಣಮಟ್ಟ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ನೀರಿನ ಗುಣಮಟ್ಟದ ಮೇಲ್ವಿಚಾರಣಾ ಕಾರ್ಯಕ್ರಮದಡಿ, ಉಳಿಕೆ ಕ್ಲೋರಿನ್, ಬ್ಯಾಕ್ಟೀರಿಯಾಲಾಜಿಕಲ್ ಹಾಗೂ ರಾಸಾಯನಿಕ ಗುಣಮಟ್ಟದ ಅಂಶಗಳ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. ಈ ವ್ಯವಸ್ಥಿತ ಪರೀಕ್ಷೆಗಳ ಮೂಲಕ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ, ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಒಂದು ವಾರ ಕಾಲ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳನ್ನು ಒಳಗೊಂಡಿರುವ ಕ್ರೋಢೀಕೃತ ವರದಿಯ ಪ್ರಕಾರ, ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ಪ್ರಮಾಣದಲ್ಲಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಸುಮಾರು 998 ಮಾದರಿಗಳಲ್ಲಿ ಯಾವುದೇ ಅಸಮರ್ಪಕವೆಂದು ಕಂಡು ಬಂದಿಲ್ಲ.

ನೈಋತ್ಯ ರೈಲ್ವೆಯು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ನಿರಂತರ ಮೇಲ್ವಿಚಾರಣೆ, ನಿಯಮಿತ ನೀರಿನ ಗುಣಮಟ್ಟ ಪರೀಕ್ಷೆ ಮತ್ತು ಅಗತ್ಯವಿರುವಲ್ಲಿ ತ್ವರಿತ ಸರಿಪಡಿಸುವ ಕ್ರಮಗಳನ್ನು ಮುಂದುವರಿಸುವುದಾಗಿ ತಿಳಿಸಿದೆ.