police vehicles 
ರಾಜ್ಯ

ಪೊಲೀಸ್ ವಾಹನಗಳ ಆಧುನೀಕರಣಕ್ಕೆ ಕ್ರಮ

ಪ್ರಮುಖ ಮುಖ್ಯಾಂಶಗಳು

  • ಹೆಚ್ಚುವರಿ ವಾಹನ ಬಾಡಿಗೆ ಹಾಗೂ ಗುತ್ತಿಗೆ ಪಡೆಯಲು ಚಿಂತನೆ
ಬೆಂಗಳೂರು: ಸಾರ್ವಜನಿಕರಿಗೆ ತ್ವರಿತ ಸೇವೆ ಮತ್ತು ಸಿಬ್ಬಂದಿಗಳಿಗೆ ಪರಿಣಾಮಕಾರಿಯಾಗಿ ಸೌಲಭ್ಯ ಕಲ್ಪಿಸಲು ರಾಜ್ಯ ಪೊಲೀಸ್ ಇಲಾಖೆ ವಾಹನಗಳನ್ನು ಆಧುನೀಕರಣಕ್ಕೆ ಪರಿಶೀಲಿಸಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪೊಲೀಸ್ ಇಲಾಖೆಯ ಸಂಪರ್ಕ, ಲಾಜಿಸ್ಟಿಕ್ ಮತ್ತು ಆಧುನೀಕರಣ ವಿಭಾಗದ ಅಧಿಕಾರಿಗಳು ಹಾಗೂ ವಿದ್ಯುತ್ ಚಾಲಿತ ಮತ್ತು ಸಾಂಪ್ರದಾಯಿಕ ವಾಹನ ತಯಾರಿಕಾ ಕಂಪನಿ ಸೇರಿ 20ಕ್ಕೂ ಹೆಚ್ಚು ಆಟೊ ಮೊಬೈಲ್ ಮತ್ತು ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಸಭೆ ನಡೆಸಿದರು. ಈ ವೇಳೆ ಮಾಹಿತಿ ನೀಡಿ ಪೊಲೀಸ್ ಇಲಾಖೆಯ ವಾಹನಗಳಿಗೆ ಬಾಡಿಗೆ ಅಥವಾ ಗುತ್ತಿಗೆ ಮಾದರಿ ಅಳವಡಿಸಿಕೊಳ್ಳುವ ಸಾಧ್ಯತೆ ಕುರಿತು ವಿಸ್ತೃತ ಚರ್ಚೆ ನಡೆಸಿದರು.
ಪೊಲೀಸ್ ಇಲಾಖೆಗೆ ಅಗತ್ಯವಿರುವ ವಾಹನಗಳನ್ನು ನೇರವಾಗಿ ಖರೀದಿಸುವುದರಿಂದ ಸರ್ಕಾರಕ್ಕೆ ಹೊರೆಯಾಗುತ್ತದೆ. ಆದರೆ, ಬದಲಾಗುತ್ತಿರುವ ಅಗತ್ಯಗಳು ಮತ್ತು ಹೆಚ್ಚುತ್ತಿರುವ ಕಾರ್ಯಾಚರಣೆ ಹೊಣೆಗಾರಿಕೆ ಗಮನದಲ್ಲಿಟ್ಟುಕೊಂಡು, ನೇರವಾಗಿ ಖರೀದಿಸುವ ಬದಲು ಗುತ್ತಿಗೆ ಅಥವಾ ಬಾಡಿಗೆ ಮಾದರಿಯನ್ನು ಅಳವಡಿಸಿಕೊಳ್ಳುವುದರಿಂದ ಲಭ್ಯವಿರುವ ಸಂಪನ್ಮೂಲ ಹೆಚ್ಚು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಸಾರ್ವಜನಿಕರ ಹಣವನ್ನು ವಿವೇಚನೆಯಿಂದ ಬಳಸಿಕೊಂಡು, ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು. ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ವೆಚ್ಚ ಮಾಡುವ ಬದಲಿಗೆ, ಇಲಾಖೆಯ ಅಗತ್ಯಕ್ಕೆ ಅನುಗುಣವಾಗಿ ವಾಹನಗಳನ್ನು ತ್ವರಿತವಾಗಿ ಸೇರ್ಪಡೆ ಮಾಡಿಕೊಳ್ಳುವ ಮತ್ತು, ಅವುಗಳ ಬಳಕೆ ಮತ್ತು ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ವಿದ್ಯುತ್ ಚಾಲಿತ ವಾಹನಗಳು ಸೇರಿ ವಿವಿಧ ಮಾದರಿಯ ವಾಹನಗಳನ್ನು ಪೊಲೀಸ್ ಇಲಾಖೆಯ ಅಗತ್ಯಗಳಿಗೆ ಬಳಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಆಧುನಿಕ ಪೊಲೀಸ್ ವ್ಯವಸ್ಥೆಗೆ ಕೇವಲ ಮಾನವ ಸಂಪನ್ಮೂಲ ಸಾಕಾಗುವುದಿಲ್ಲ, ಅಗತ್ಯವಾದ ಚಲನಶೀಲತೆ, ತಂತ್ರಜ್ಞಾನ ಮತ್ತು ಮೂಲಸೌಕರ್ಯವೂ ಮುಖ್ಯವಾಗಲಿದೆ ಎಂದು ಸಚಿವರು ಹೇಳಿದರು.