ಬೆಂಗಳೂರು: ಸಾಬೂನು ಮತ್ತು ಮಾರ್ಜಕಗಳ ನಿಗಮ (ಕೆಎಸ್‌ಡಿಎಲ್) 2025-26ನೇ ಸಾಲಿನಲ್ಲಿ 2,016 ಕೋಟಿ ರೂ. ವಹಿವಾಟು ನಡೆಸಿ, 507 ಕೋಟಿ ರೂ. ನಿವ್ವಳ ಲಾಭ ದಾಖಲಿಸಿ ಸಾಧನೆ ಮಾಡಿದೆ.
ಇದರ ಶ್ರೇಯಸ್ಸು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ದೂರಗಾಮಿ ಚಿಂತನೆಗಳಿಗೆ ಸಲ್ಲುತ್ತದೆ. ಇದಕ್ಕಾಗಿ ಅವರು ಅಭಿನಂದನಾರ್ಹರು ಎಂದು ಸರ್ಕಾರಿ ಸಾಬೂನು ಕಾರ್ಖಾನೆ ಕಾರ್ಮಿಕರ ಸಂಘ ಹೇಳಿದೆ. ಜತೆಗೆ ಅಧ್ಯಕ್ಷ ಮೈಕೇಲ್ ಫರ್ನಾಂಡಿಸ್ ನೇತೃತ್ವದಲ್ಲಿ ಪದಾಧಿಕಾರಿಗಳು, ಸಚಿವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಫರ್ನಾಂಡಿಸ್, ಸಾಬೂನು ಕಾರ್ಖಾನೆಯು 110 ವರ್ಷಗಳ ಇತಿಹಾಸದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ವಹಿವಾಟು ನಡೆಸಿದೆ. 47,494 ಮೆಟ್ರಿಕ್ ಟನ್ ಉತ್ಪಾದನೆ ದಾಖಲಿಸಿದೆ.ಇದು ಸಾರ್ವಕಾಲಿಕ ದಾಖಲೆಯಾಗಿದೆ. ಇದಕ್ಕೆ ಪಾಟೀಲರ ದೂರದೃಷ್ಟಿಯ ಚಿಂತನೆಯೇ ಕಾರಣವಾಗಿದೆ. ಇವರ ಜತೆಗೆ ಸಂಸ್ಥೆಯ ಅಧ್ಯಕ್ಷ ಸಿ.ಎಸ್.ಅಪ್ಪಾಜಿ ನಾಡಗೌಡರ ಕೊಡುಗೆಯೂ ಇದೆ.
ಕಾರ್ಖಾನೆಯಲ್ಲಿ ಮತ್ತಷ್ಟು ಉತ್ಪಾದನೆ ಹೆಚ್ಚಿಸಲು ಮತ್ತು ಮಾರುಕಟ್ಟೆ ವಿಸ್ತರಿಸಲು ಸಚಿವರು ಹಲವು ಹೊಸಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಯಶಸ್ಸಿಗೆ ಉದ್ಯೋಗಿಗಳ ಅಗತ್ಯವಿದೆ. ಆದರೆ ಈಗ ಸಿಬ್ಬಂದಿ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಸಂಸ್ಥೆಯಲ್ಲಿ ನೇರ ನೇಮಕಾತಿ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಕಾರ್ಖಾನೆಯ ಸಾಧನೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ. ಈ ನಿಟ್ಟಿನಲ್ಲಿ ಸಚಿವ ಪಾಟೀಲ್ ಸಹಕಾರ ಮತ್ತು ಸಲಹೆಗಳು ಅತ್ಯಗತ್ಯವಾಗಿವೆ ಎಂದು ತಿಳಿಸಿದ್ದಾರೆ.