ಹುಣಸೂರು ನಗರದಲ್ಲಿ ಕಲಾರಂಗ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಯುವಕವಿಗೋಷ್ಠಿ ಕಾರ್ಯಕ್ರಮವನ್ನು ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್ ಜನ್ನಿ ಉದ್ಘಾಟಿಸಿದರು. ಕಲಾರಂಗದ ಸೌಮ್ಯ, ಪ್ರೊ.ಎಚ್.ಆರ್.ಸಿದ್ದೇಗೌಡ, ರೇಣುಕಪ್ರಸಾದ್,ಬೀರೇಶ್ ಇದ್ದಾರೆ. 
ರಾಜ್ಯ

ಕವನ ವಾಚನ ಪರಂಪರೆ ಉಳಿದು, ಬೆಳೆಯಲಿ

ಹುಣಸೂರು:

ಕವಿತೆ ರಚನೆ ಎನ್ನುವುದು ಒಂದು ಸೃಜನಶೀಲ ಕಾರ್ಯವಾಗಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್ ಜನ್ನಿ ಅಭಿಪ್ರಾಯಪಟ್ಟರು.


ಹುಣಸೂರು ಕಲಾರಂಗ ಸಂಸ್ಥೆ ವತಿಯಿಂದ ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಯುವಕವಿ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.


ಪ್ರತಿಯೊಬ್ಬರೂ ತಮ್ಮೊಳಗಿರುವ ಪ್ರತಿಭೆಯನ್ನು ತಾವೇ ಗುರುತಿಸಿಕೊಂಡು ಹೊರಜಗತ್ತಿಗೆ ತೋರಿಸಿ ಅದೃಷ್ಟ ಪರೀಕ್ಷೆಗೊಡ್ಡಬೇಕು. ಕವಿ ತನ್ನ ಮನದಾಳದ ಮಾತುಗಳನ್ನು ಅಥವಾ ಸಮಾಜದ ಸಚಿತ್ರ ವಿವರವನ್ನು ಸೃಜನಶೀಲ ಮನಸಿನೊಂದಿಗೆ ಅಕ್ಷರರೂಪದಲ್ಲಿ ಇರಿಸಬೇಕು. ಕವನ ವಾಚನ ಪರಂಪರೆ ಪ್ರಸ್ತುತ ಕಾಣದಂತಾಗಿದ್ದು, ಈ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ಯುವಕವಿಗಳ ಮೇಲಿದೆ ಎಂದರು.


ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್.ಸಿದ್ದೇಗೌಡ ಮಾತನಾಡಿ, ಕಾವ್ಯವಾಚನ ಯಾವಾಗಲು ಸಂತೋಷದಾಯಕ ಹಾಗು ಮಾರ್ಗದರ್ಶಕ. ಪಂಪ ಮಹಾಕವಿ, ಆಧುನಿಕ ಕವಿ ಕುವೆಂಪು ರಚಿಸಿದ ಪದ್ಯಗಳು ಮಾನವಕುಲಕ್ಕೆ, ಸ್ವಾಭಿಮಾನದ ಸಮಾನತೆಯ ಬದುಕಿಗೆ ದಾರಿದೀಪವಾಗಿವೆ. ಈ ಕವಿಗೋಷ್ಠಿಯಲ್ಲಿ ಹಲವು ಪ್ರಚಲಿತ ವಿಷಯಗಳ ಕುರಿತು ಕವಿಗಳು ಕ್ಷಕಿರಣ ಬೀರುವ ಮೂಲಕ ಸಕಾಲಿಕ ಪರಿಸ್ಥಿತಿ ಮತ್ತು ಕವಿಯ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದ್ದಾರೆ ಎಂದರು.


ಕಲಾರಂಗ ಸಂಸ್ಥೆ ವ್ಯವಸ್ಥಾಪಕಿ ಸೌಮ್ಯಾ ಪ್ರಾಸ್ತವಿಕವಾಗಿ ಮಾತನಾಡಿ, ಹುಣಸೂರು ಕಲಾರಂಗ ಯುವಕವಿಗಳನ್ನು ಒಂದೆಡೆ ಸೇರಿಸಿ ಕವಿತೆಗಳನ್ನು ವಾಚಿಸಬೇಕು, ಕವಿ ಪರಂಪರೆ ಮುದುವರೆಯಬೇಕು ಎಂಬ ಅಭಿಲಾಷೆಯಿಂದ ಕವಿಗೋಷ್ಠಿ ಸಂಘಟಿಸಿದೆ ಎಂದರು.

ಸಾಹಿತಿ ರೇಣುಕಾ ಪ್ರಸಾದ್ ಮಾತನಾಡಿದರು. ಶಿಕ್ಷಕರಾದ ಕಲ್ಕುಣಿಕೆ ಬಸವರಾಜ್, ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರಿಕಾಂತ್, ನಿವೃತ್ತ ಶಿಕ್ಷಕ ಬೀರೇಶ್ ಇತರರು ಇದ್ದರು.