ವಾಡಿಯಲ್ಲಿ ಜನಧ್ವನಿ ಜಾಗೃತ ಸಮಿತಿಯಿಂದ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮವನ್ನು ಮುಖಂಡ ವೀರಭದ್ರಪ್ಪ ಆರ್.ಕೆ. ಉದ್ಘಾಟಿಸಿದರು. ಎ.ಅಗರವಾಲ್, ಶಿವಪ್ಪ ಮುಂಡರಗಿ, ಭೀಮಸಿಂಗ್ ಚವ್ಹಾಣ್, ಸಿದ್ದಯ್ಯ ಶಾಸಿ ಇತರರಿದ್ದರು
- ಅಧ್ಯಕ್ಷ ವೀರಭದ್ರಪ್ಪ ಆರ್.ಕೆ.ಅನಿಸಿಕೆ
- ವಾಡಿಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ
ವಾಡಿ: ಯಾವುದೇ ಕಲೆ, ಸಾಹಿತ್ಯ, ಸಂಗೀತ, ನಾಟಕ, ಗಾಯನ ಮನರಂಜನೆಗೆ ಸೀಮಿತವಾಗದೆ, ಜನರ ಮನ ಅರಳಿಸಿ ಒಗ್ಗಟ್ಟು ಮೂಡಿಸುವಂತಿರಬೇಕು ಎಂದು ಜನಧ್ವನಿ ಜಾಗೃತ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ. ಹೇಳಿದರು.
ನ್ಯೂ ವಿಸ್ಡಮ್ ಶಾಲೆಯ ಸಭಾಂಗಣದಲ್ಲಿ ಜನಧ್ವನಿ ಜಾಗೃತ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೋಮುಭಾವನೆ ಕೆರಳಿಸುವಂತಹ ಹಾಡುಗಳಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ. ಜನರು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಒಡೆದುಹೋಗುವ ಅಪಾಯವಿರುತ್ತದೆ. ಪ್ರಭಾವಶಾಲಿ ಮಾಧ್ಯಮಗಳಾಗಿರುವ ಚಿತ್ರಕಲೆ, ಸಾಹಿತ್ಯ, ಸಂಗೀತ, ಸಿನಿಮಾ ಸಮಾಜಮುಖಿಯಾಗಿದ್ದರೆ ಜನರಲ್ಲಿ ಏಕತೆ ಮೂಡಲು ಸಾಧ್ಯವಾಗುತ್ತದೆ ಎಂದರು.
ಅಶ್ಲೀಲ ಸಿನಿಮಾ ಸಾಹಿತ್ಯದಿಂದ ಯುವಜನರು ಸಾಂಸತಿಕವಾಗಿ ದಿವಾಳಿ ಆಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ದ್ವಂದ್ವಾರ್ಥದಿಂದ ಕೂಡಿದ ಹಾಡುಗಳು ಸಮಾಜದ ವಾತಾವರಣ ಹಾಳು ಮಾಡುತ್ತಿವೆ. ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ವಿವಿಧ ಮಾಧ್ಯಮಗಳ ಕಲಾವಿದರ ಮೇಲಿರುವುದರಿಂದ ಸಮಾಜ ಕಟ್ಟುವ ಹಾಗೂ ಜನರನ್ನು ಅನ್ಯಾಯಗಳ ವಿರುದ್ಧ ಸಿಡಿದೇಳಿಸುವ ಕಲೆ ಪ್ರದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.
ಸಮಿತಿ ಗೌರವಾಧ್ಯಕ್ಷ ಜಯದೇವ ಜೋಗಿಕಲ್ಮಠ ಅಧ್ಯಕ್ಷತೆ ವಹಿಸಿದ್ದರು.
ನ್ಯೂ ವಿಸ್ಡಮ್ ಶಾಲೆ ಮುಖ್ಯಸ್ಥ ಎ.ಅಗರವಾಲ್, ಪ್ರಮುಖರಾದ ಶಿವಪ್ಪ ಮುಂಡರಗಿ, ಭೀಮಸಿಂಗ್ ಚವ್ಹಾಣ್, ಸುರೇಶ ನಾಟೇಕರ, ಕಾಶೀನಾಥ ಶೆಟಗಾರ, ಮಲ್ಲಯ್ಯಸ್ವಾಮಿ ಮಠಪತಿ, ಮಡಿವಾಳಪ್ಪ ಹೇರೂರ, ಅಮೃತಪ್ಪ ದಿಗ್ಗಾಂವ್, ವಿಠ್ಠಲ್ ರಾಠೋಡ್, ದೇವಿಂದ್ರ ಕರದಳ್ಳಿ, ಭೀಮಣ್ಣ ಹವಾಲ್ದಾರ್, ಈರಣ್ಣ ಯಲಗಟ್ಟಿ, ಸುರೇಶ ಬನಸೋಡೆ, ಬಸವರಾಜ ಕೇಶ್ವಾರ, ಸುನೀಲ್ ರಾಠೋಡ್, ಗುಂಡಪ್ಪ ಭಂಕೂರ, ದಯಾನಂದ ಖಜೂರಿ, ರವಿ ಕೋಳಕೂರ ಇತರರಿದ್ದರು.
ಜನಧ್ವನಿ ಜಾಗೃತ ಸಮಿತಿ ಹಿರಿಯ ಮುಖಂಡ ಮಹ್ಮದ್ ಇಸೂಫ್ ಸಾಬ್ ಮುಲ್ಲಾ ಪ್ರಾಸ್ತಾವಿಕ ಮಾತನಾಡಿದರು. ಶೇಖ್ ಅಲ್ಲಾಭಕ್ಷ ಸ್ವಾಗತಿಸಿದರು. ಸಿದ್ದಯ್ಯಶಾಸಿ ನಂದೂರುಮಠ ನಿರೂಪಣೆ ಮಾಡಿದರು. ರಮೇಶ ಮಾಶಾಳ ವಂದಿಸಿದರು.